ಈ ಕ್ಷೇತ್ರಗಳಲ್ಲೂ ಏನಾದ್ರೂ ಅಡ್ಜಸ್ಟ್​​ಮೆಂಟ್ ಆಗಿದೆಯೇ? ಅಶೋಕ್‌ ವಿರುದ್ಧ ಶಾ ಗರಂ..!

ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆ ವೇಳೆ, ಲೋಕಸಭಾ ಚುನಾವಣೆಯ ರಾಜ್ಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಅಶೋಕ್ ಯಡವಟ್ಟು ಮಾಡಿದ್ದಾರೆ. ಆ ಯಡವಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀವ್ರ ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಅಶೋಕ್‌ರನ್ನು ಅಮಿತ್ ಶಾ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಆರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲು ಅಮಿತ್ ಶಾ ಸೂಚಿಸಿದ್ದರು. ಆದ್ರೆ ಅಮಿತ್ ಶಾ ಸೂಚನೆಯನ್ನು ಗಾಳಿಗೆ ತೂರಿ, 4 ಕ್ಷೇತ್ರಗಳಿಗೆ ಮಾತ್ರ ಸಮಾವೇಶವನ್ನು ಅಶೋಕ್ ಸಿಮೀತಗೊಳಿಸಿದ್ದರು.

ಅಮಿತ್ ಶಾ ಗೆ ತಿಳಿಸದೇ ವಿಷಯ ಮುಚ್ಚಿಟ್ಟ ಆರ್. ಅಶೋಕ್!
ಅಮಿತ್ ಶಾ ಸೂಚನೆ ನೀಡಿದ್ದು 6 ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನ್ನು ಸೇರಿಸಿ ಎಂದು. ಆದ್ರೆ ಆರ್.ಅಶೋಕ್ ಸೇರಿಸಿದ್ದು 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಮಾತ್ರ. ಬೆಂಗಳೂರು ಉತ್ತರ, ‌ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳು ಒಂದೆಡೆ ಇರಬೇಕು ಎಂದು ಅಮಿತ್ ಶಾ ಸೂಚಿಸಿದ್ದರು.

ಅದ್ರೆ ಆರ್. ಅಶೋಕ್ ಸೇರಿಸಿದ್ದು ಮಾತ್ರ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಅಭ್ಯರ್ಥಿಗಳನ್ನ ಹಾಗೂ ಕಾರ್ಯಕರ್ತರನ್ನ. ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್.ಬಚ್ಚೇಗೌಡ ಹಾಗೂ ಕೋಲಾರ ಕ್ಷೇತ್ರದ ಮುನಿಸ್ವಾಮಿ ಅವರನ್ನು ಅಶೋಕ್, ಸಮಾವೇಶಕ್ಕೆ ಆಹ್ವಾನಿಸಿಲ್ಲ.

ರಾಜ್ಯ ಬಿಜೆಪಿ ಪ್ರಚಾರ ಸಮಿತಿಯಿಂದ ಯಾವುದೇ ಆಹ್ವಾನವಿಲ್ಲದ ಹಿನ್ನೆಲೆ, ಸಮಾವೇಶದ ವೇದಿಕೆಯಿಂದ ಬಿ.ಎನ್. ಬಚ್ಚೇಗೌಡ ಮತ್ತು ಮುನಿಸ್ವಾಮಿ ದೂರವುಳಿದಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಸಮಾವೇಶದ ವೇದಿಕೆಯಿಂದ ದೂರವಿದ್ದು, ತಮ್ಮ ತಮ್ಮ ಕ್ಷೇತ್ರಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಜೊತೆಗೆ ಈ ಇಬ್ಬರೂ ಅಭ್ಯರ್ಥಿಗಳನ್ನು ಸಮಾವೇಶಕ್ಕೆ ಆಹ್ವಾನ ನೀಡದ ವಿಚಾರವನ್ನು ಅಮಿತ್ ಶಾ ಗೆ ತಿಳಿಸದೇ ಆರ್. ಅಶೋಕ್ ಮುಚ್ಚಿಟ್ಟಿದ್ದರು. ಆದ್ರೆ ಪ್ರಧಾನಿ ಮೋದಿ ಬಂದ ಹೋದ ಬಳಿಕ ಇಬ್ಬರು ಅಭ್ಯರ್ಥಿಗಳಿಗೆ ಆಹ್ವಾನವಿಲ್ಲದ ವಿಚಾರವನ್ನು ಅಮಿತ್ ಶಾ ತಿಳಿದುಕೊಂಡಿದ್ದಾರೆ. ಅಶೋಕ್​ರ ಈ ನಡೆಗೆ ಅಮಿತ್ ಶಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರಗಳಲ್ಲೂ ಏನಾದ್ರೂ ಅಡ್ಜಸ್ಟ್​​ಮೆಂಟ್ ಆಗಿದೆಯೇ?
ಅಶೋಕ್ ನೀವು ಮಾಡಿದ್ದು ಸರಿಯಲ್ಲ. ವೇದಿಕೆಯಲ್ಲಿ 6 ಕ್ಷೇತ್ರದ ಅಭ್ಯರ್ಥಿಗಳು ಹಾಜರಿರಬೇಕೆಂದು ಸೂಚನೆ ನೀಡಲಾಗಿತ್ತು. ನೀವು 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸಿದ್ದೀರಿ. ಇನ್ನು 2 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಸಮಾವೇಶದಿಂದ ದೂರವಿಟ್ಟಿದ್ದೇಕೆ? ಚಿಕ್ಕಬಳ್ಳಾಪುರ ಮತ್ತು ಕೋಲಾರ ಗೆಲ್ಲುವುದು ನಿಮಗೆ ಇಷ್ಟವಿಲ್ಲವಾ? ಈ ಕ್ಷೇತ್ರಗಳಲ್ಲೂ ಏನಾದ್ರೂ ಅಡ್ಜಸ್ಟ್​​ಮೆಂಟ್ ಆಗಿದೆಯೇ? ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 6 ಕ್ಷೇತ್ರಗಳ ಹೆಸರು ಹೇಳಿದ್ದಾರೆ. ನೀವು 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸುತ್ತೀರಿ. ಖುದ್ದು ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಾರದಂತೆ ಯಾಮಾರಿಸುತ್ತೀರಿ. ಏನು ನಡೆಯುತ್ತಿದೆ ನಿಮ್ಮ ರಾಜ್ಯದಲ್ಲಿ? ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೋಡಿದ್ರೆ, ಎಲ್ಲವೂ ಸರಿಯಾಗಿದೆ ಅನ್ನುತ್ತಾರೆ. ಈ ರೀತಿಯಲ್ಲಾ ನೀವು ಸಮಾವೇಶ ನಡೆಸುವುದು? ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಹ್ವಾನಿಸಿಲ್ಲ ಏಕೆ? ಎಂಬುದರ ಸಂಪೂರ್ಣ ಮಾಹಿತಿ ನನಗೆ ನೀಡಬೇಕು. ಇಲ್ಲವಾದ್ರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆರ್.ಅಶೋಕ್‌ಗೆ ಅಮಿತ್ ಶಾ ಎಚ್ಚರಿಕೆ ಕೊಟ್ಟಿದ್ದಾರೆ.

ಅಶೋಕ್ ತಬ್ಬಿಬ್ಬು
ಅಮಿತ್ ಶಾ ಮಾತನ್ನು ಕೇಳಿ ಆರ್. ಅಶೋಕ್ ತಬ್ಬಿಬ್ಬಾಗಿದ್ದಾರೆ. ತಾನು ಮಾಡಿರುವ ಯಡವಟ್ಟನ್ನು ಅಮಿತ್ ಶಾ ಗೆ ತಿಳಿಸಿದ್ದು ಯಾರು? ಎಂದು ಪಕ್ಷದೊಳಗೆ ಹುಡುಕಾಟ ನಡೆಸಿದ್ದಾರೆ. ಸದ್ಯ ಮಾಡಿದ ಯಡವಟ್ಟು ಅಮಿತ್ ಶಾ ಗಮನಕ್ಕೆ ಬಂದಿದ್ದು, ಮುಂದೆ ಇದರಿಂದ ಪಾರಾಗುವುದು ಹೇಗೆ? ಎಂದು ಆರ್. ಅಶೋಕ್ ಯೋಚಿಸತೊಡಗಿದ್ದಾರೆ.

ವಿಶೇಷ ವರದಿ: ಪಿ. ಮಧುಸೂಧನ್​


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv