ಇವರೇ ರೆಬಲ್​ ಸ್ಟಾರ್​ ಅಂಬಿಯ ಜೀವದ ಗೆಳೆಯ​…!

ರೆಬೆಲ್ ಸ್ಟಾರ್​ ಅಂಬರೀಶ್​, ದಶಕದ ನಂತರ ಮತ್ತೆ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಅಂಬಿ ನಿಂಗ್​ ವಯಸ್ಸಾಯ್ತೊ ಸಿನಿಮಾದಿಂದ ಮತ್ತೆ ಜಲೀಲನ ಜಮಾನ ಆರಂಭಿಸ್ತಿದ್ದಾರೆ. ಇಲ್ಲಿ ಮಂಡ್ಯದ ಹುಲಿ ವಯಸ್ಸಿಗೆ ಮೀರಿದ ಪಾತ್ರ, ಫೈರಿಂಗ್​ ಡೈಲಾಗ್, ಪೊಗರ್​ದಸ್ತ್​ ಫೈಟಿಂಗ್ ಮಾಡೋದ್ರ ಜೊತೆಗೆ, ಸಿನಿಮಾಗೇ ಮೇನ್​ ಪಿಲ್ಲರ್ ಆಗಿದ್ದಾರೆ. ಈ ಚಿತ್ರದ ಮತ್ತೊಂದು ಇಂಟರೆಸ್ಟಿಂಗ್​ ಕ್ಯಾರೆಕ್ಟರ್ ಅಂದರೆ ಅಂಬಿಯ ಪಕ್ಕದ ಮನೆ ಹುಡುಗ. ಆತನೇ ಈ ಚಿತ್ರದಲ್ಲಿ ಅಂಬಿಯ ಬೆಸ್ಟ್​​ ಫ್ರೆಂಡ್..! ಅಂಬಿಯ ಆ ಗೆಳೆಯನೇ ಅಭಿಷೇಕ್ ದಾಸ್ ಅನ್ನೋ ಹುಡುಗ. ಆ ಹುಡುಗ ಯಾರು? ಈ ಪಾತ್ರ ಸಿಕ್ಕಿದ್ದು ಹೇಗೆ? ‘ಫಸ್ಟ್​ನ್ಯೂಸ್​‘ ಜೊತೆ ಅಂಬಿ ಗೆಳಯನ ಮಾತು ಇಲ್ಲಿವೆ..!

ಮಂಡ್ಯದ ಹುಲಿ ಜೊತೆಗೆ ಮೈಸೂರ್ ಹುಡ್ಗ..!
ಅಂಬಿ ನಿಂಗ್ ವಯಸ್ಸಾಯ್ತೊ ಚಿತ್ರದಲ್ಲಿ ಅಂಬಿ ಗೆಳೆಯನಾಗಿ ನಟಿಸಿರೋದು ಮೈಸೂರಿನ ಪ್ರತಿಭೆ ಅಭಿಷೇಕ್​ ದಾಸ್​. ನಗರದ ಪಡುವಾರಹಳ್ಳಿ ಹುಡುಗನಾದ ಅಭಿ ಕ್ಯಾಮೆರಾ ಫೇಸ್​ ಮಾಡ್ತಿರೋದು ಮೊದಲೇನಲ್ಲ. ಖಾಸಗಿ ವಾಹಿನಿಯ ಹಲವು ರಿಯಾಲಿಟಿ ಶೋಗಳಿಂದ ಆತ ಕನ್ನಡಿಗರಿಗೆ ಚಿರಪರಿಚಿತ. ಬ್ರಿಲಿಯಂಟ್ ಡ್ಯಾನ್ಸರ್ ಆಗಿರೋ ಅಭಿ, ಜನಪ್ರಿಯ ಡ್ಯಾನ್ಸ್ ರಿಯಾಲಿಟಿನಲ್ಲೂ ಹೆಜ್ಜೆ ಹಾಕಿ ಬಂದಿದ್ದಾರೆ. ಇದರೊಟ್ಟಿಗೆ ಸರಾಯು ಅನ್ನೋ ಧಾರವಾಹಿಯಲ್ಲಿ ಲೀಡ್​ರೋಲ್​ನಲ್ಲಿ ನಟಿಸಿದ್ದ ಅಭಿ, ತೆಲುಗು ಕಿರುತೆರೆಯ ಬಾಗಿಲನ್ನೂ ಬಡಿದು ಬಂದಿದ್ದಾರೆ. ಮಾಡೆಲಿಂಗ್​ನಿಂದ ಜರ್ನಿ ಆರಂಭಿಸಿ, ಸಿನಿಮಾದಲ್ಲಿ ನೆಲೆ ಕಂಡುಕೊಳ್ತಿರೋ ಅಭಿ, ಸದ್ಯಕ್ಕೆ ಮೈಸೂರಿನಲ್ಲಿ ಬಿಸಿಎ ಫೈನಲ್ ಇಯರ್​ ವ್ಯಾಸಂಗ ಮಾಡ್ತಿದ್ದಾರೆ.

ಅಂಬಿ ಜೊತೆಗೆ ಅಭಿ ಸೇರಿದ್ದು ಹೇಗೆ..?
ಸಿನಿಮಾ ಆರಂಭಕ್ಕೂ ಮೊದಲೇ ಅಭಿಗೆ ನಿರ್ದೇಶಕ ಗುರುದತ್​ ಗಾಣಿಗ ಪರಿಚಯವಿತ್ತು. ಹೀಗಾಗಿ ಗುರುದತ್​, ಅಭಿಷೇಕ್​ಗೆ ಆಡಿಷನ್​ ಫೇಸ್​ ಮಾಡೋಕೆ ಹೇಳಿದ್ದರು. ಅದರಂತೆ, ಆಡಿಷನ್​ನಲ್ಲಿ ತನ್ನ ಟ್ಯಾಲೆಂಟ್​ ತೋರಿಸಿ ಪಾಸಾದ ಅಭಿ, ಅಂಬಿ ನಿಂಗ್​ ವಯಸ್ಸಾಯ್ತೊ ಟೀಂ ಸೇರಿಕೊಂಡರು. ಸಿನಿಮಾದಲ್ಲಿ ಕಾರ್ತಿಕ್​ ಅನ್ನೋ ಪಾತ್ರ ನಿಭಾಯಿಸ್ತಿರೋ ಅಭಿ, ರೆಬೆಲ್​ ಸ್ಟಾರ್​ ಪಕ್ಕದ ಮನೆ ಹುಡುಗನಾಗಿ ನಟಿಸಿದ್ದಾರೆ. ಅಂಬಿ ಜೊತೆಗೆ ಪಾರ್ಟಿ ಮಾಡೋದಲ್ಲದೇ ಬೆಸ್ಟ್​ ಫ್ರೆಂಡ್ ಆಗಿ ಸಿನಿಮಾದ ಕೊನೆವರೆಗೂ ಜೊತೆಗಿರ್ತಾರೆ.

ಫಸ್ಟ್​ ಡೇನೆ ಅಂಬಿಯ ಪ್ರೀತಿಯ ಬೈಗುಳ..!
ಫಸ್ಟ್ ಡೇ ಶೂಟಿಂಗ್​​ ವೇಳೆ ಅಭಿ ಸಖತ್​ ನರ್ವೆಸ್ ಆಗಿದ್ದರಂತೆ. ಅದ್ರಲ್ಲೂ, ಫಸ್ಟ್​ ಶಾಟ್​ನಲ್ಲೇ ಅಂಬಿ ಮುಂದೆ ಡೈಲಾಗ್​ ಹೊಡೆಯೋ ಸೀನ್​ ಅದು. ಹೇಗಪ್ಪಾ ಡೈಲಾಗ್​ ಹೊಡೆಯೋದು ಅನ್ನೋ ಭಯದಲ್ಲೇ ಅಭಿ ಕ್ಯಾಮೆರಾ ಫೇಸ್ ಮಾಡಿದ್ದರಂತೆ. ಹೀಗಾಗಿ ಅಪ್ಪಾಜಿ ಭಯ ಆಗ್ತಿದೆ ಅಂತಾ ಅಭಿ, ರೆಬೆಲ್ ಸ್ಟಾರ್​ಗೆ ಹೇಳ್ತಾಗ, ಅವರು  ಎಂದಿನಂತೆ ‘ಏ ಬಡೆತ್ತದೇ ಆರಾಮಾಗಿ ಮಾಡ್ಲಾ..‘ ಅಂತಾ ಪ್ರೀತಿಯಿಂದ ಗದರಿದ್ರು. ಈ ಮಾತಿನಿಂದ ಆ್ಯಕ್ಟೀವ್ ಆದ ಅಭಿ, ಧೈರ್ಯವಾಗಿಯೇ ಕ್ಯಾಮೆರಾ ಫೇಸ್​ ಮಾಡಿದ್ರು. ಕೊನೆಗೆ ಅಂಬಿಯೇ ಹುಡುಗ ಚೆನ್ನಾಗಿ ನಟಿಸ್ತಾನೆ ಅಂತಾ ಹೇಳಿದ್ರಂತೆ ಅಂತಾ ತಮ್ಮ ಅನುಭವವನ್ನು ಅಭಿ ಫಸ್ಟ್​ ನ್ಯೂಸ್​ ಜೊತೆ ಎಕ್ಸೈಟ್ ಆಗಿಯೇ ಹೇಳಿದ್ರು.

ಅಭಿ ವಾಯ್ಸಿಗೆ ಕಿಚ್ಚ ಫಿದಾ..!

ಶೂಟಿಂಗ್ ವೇಳೆ ಅಂಬಿಯಿಂದ ಬೆನ್ನು ತಟ್ಟಿಸಿಕೊಂಡಿದ್ದ ಅಭಿಗೆ, ಸಿನಿಮಾ ಶೂಟಿಂಗ್ ಮುಗಿದ ಮೇಲೆ ಸುದೀಪ್ ಶಹಬ್ಬಾಸ್ ಗಿರಿ ಸಿಕ್ಕಿತಂತೆ. ಫಸ್ಟ್​ ನ್ಯೂಸ್​ ಜೊತೆ ಈ ಅನುಭವ ಬಿಚ್ಚಿಟ್ಟ ಅಭಿ, ಸಿನಿಮಾ ಶೂಟಿಂಗ್​ ಮುಗಿದ ನಂತರ ಕಿಚ್ಚ ಸುದೀಪ್​ ಭೇಟಿ ಮಾಡಿದ್ದೆ. ಈ ವೇಳೆ  ನನಗೆ ವಿಶ್ ಮಾಡಿದ ಸುದೀಪ್ ಸರ್, ‘ರೆಬೆಲ್ ಸ್ಟಾರ್​ ಜೊತೆಗೆ ಆ್ಯಕ್ಟ್​ ಮಾಡೋದೆ ದೊಡ್ಡ ವಿಷ್ಯ, ನೀನು ಅದನ್ನು ಪರ್ಫೆಕ್ಟ್ ಆಗಿ ಮಾಡಿದ್ದೀಯಾ. ನಿನ್ನ ವಾಯ್ಸು ಕೂಡ ಚೆನ್ನಾಗಿದೆ ಅಂತಾ ಹೇಳಿದಾಗ ನನಗೆ ಆಕಾಶಕ್ಕೆ ಮೂರೇ ಗೇಣು ಅನ್ನೋ ರೀತಿ ಆಗಿತ್ತು ಅಂತಾ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv