₹6 ಕೋಟಿ ಆಸ್ತಿ ಮುಚ್ಚಿಟ್ಟ ಆರೋಪ, ಪ್ರಜ್ವಲ್ ವಿರುದ್ಧ ದೂರು

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದರೂ ಎಂಪಿ ಸ್ಥಾನದಿಂದ  ಡಿಸ್​ಕ್ವಾಲಿಫೈ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೈ ಕೋರ್ಟ್ ವಕೀಲ ದೇವರಾಜು ಗೌಡ ಎಂಬುವವರು ಪ್ರಜ್ವಲ್ ತನಗೆ ಸೇರಿದ ₹ 6 ಕೋಟಿ ಮೌಲ್ಯದ ಆಸ್ತಿ ಮುಚ್ಚಿಟ್ಟು ಆಯೋಗಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಹೊಳೆನರಸೀಪುರದ ಚೆನ್ನಾಂಬಿಕ ಕನ್ವೆನ್ಶನ್​​ ಹಾಲ್ ಸಂಬಂಧ ಪ್ರಜ್ವಲ್ ಆಯೋಗಕ್ಕೆ ಸುಳ್ಳು ದಾಖಲೆಯ ಮಾಹಿತಿ ನೀಡಿದ್ದಾರೆ. ಆಯೋಗಕ್ಕೆ ಪ್ರಜ್ವಲ್ ನೀಡಿದ ಪ್ರಮಾಣ ಪತ್ರದ ಕಮರ್ಷಿಯಲ್ ಕಾಲಂನಲ್ಲಿ ನಿಲ್ ಎಂದು ತೋರಿಸಿದ್ದಾರೆ. ಚೆನ್ನಾಂಬಿಕ ಕನ್ವೆನ್ಶನ್​​ ಹಾಲ್​ನಲ್ಲಿ ಪ್ರಜ್ವಲ್ ಕೇವಲ 14 ಲಕ್ಷದ 66 ರೂಪಾಯಿ ಸೈಟ್ ಹೂಡಿಕೆ ಮಾಡಿದ್ದಾರೆ. ಆದರೆ, ಕನ್ವೆನ್ಶನ್​​ ಹಾಲ್ ಬದಲಾಗಿ ಖಾಲಿ ಸೈಟ್ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾತನ ಅಫಿಡವಿಟ್​​ ಮಾಹಿತಿ, ಮೊಮ್ಮಗನ  ಅಫಿಡವಿಟ್​​ನಲ್ಲಿ ಉಲ್ಲೇಖವಾಗಿಲ್ಲ!
ಅಲ್ಲದೇ ದೇವೇಗೌಡರು ಪ್ರಜ್ವಲ್​​ಗೆ ₹ 23 ಲಕ್ಷ ನೀಡಿದ್ದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಪ್ರಜ್ವಲ್ ಆ ಹಣದ ಬಗ್ಗೆ ಎಲ್ಲೂ ಸಹ ಅಫಿಡವಿಟ್​ನಲ್ಲಿ ಉಲ್ಲೇಖಿಸಿಲ್ಲ. ಇದು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 33 ಎ ಪ್ರಕಾರ ಅಪರಾಧವಾಗಿದೆ. ಇದು ಸಾಬೀತಾದರೆ, ಪ್ರಜ್ವಲ್​​ ಅನರ್ಹಗೊಳ್ಳುವುದರ ಜೊತೆಗೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಸದ್ಯ ಈ ಬಗ್ಗೆ ದೇವರಾಜು ಅವರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಸದ್ಯ ದೇವರಾಜು ಆಯೋಗದ ಎಂಡಾರ್ಸ್​​ಮೆಂಟ್​ ಕಾಪಿಗಾಗಿ ಕಾಯುತ್ತಿದ್ದಾರೆ. ಅದು ಬಂದ ಮೇಲೆ ದೇವರಾಜು ಎಂಡಾರ್ಸ್​​ಮೆಂಟ್ ಕಾಪಿ ಪಡೆದು ಕೋರ್ಟ್ ಮೆಟ್ಟಿಲೇರಲಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಪತ್ತೆಯಾಗಿದೆ. ಹೈಕೋರ್ಟ್ ತೀರ್ಮಾನದಂತೆ ಪ್ರಜ್ವಲ್ ಎಂಪಿ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಪ್ರಜ್ವಲ್‌ ಚುನಾವಣೆಯಲ್ಲಿ ಗೆದ್ದರೂ ಅನರ್ಹನಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv