250 ಕಿ.ಮೀ. ವೇಗದಲ್ಲಿ ಗೋಡೆಗೆ ಗುದ್ದಿ, 4 ತಾಸು ಹಾರಾಡಿದ ವಿಮಾನ..!

ಅವ್ರೆಲ್ಲರ ಅದೃಷ್ಟ ಗಟ್ಟಿಯಾಗಿಯೇ ಇತ್ತು.. ಅದ್ಕೆ ಪ್ರಾಣಾಪಾಯದಿಂದ ಸೇಫ್ ಆಗಿದ್ದಾರೆ! ಸಮಯ ನಿನ್ನೆ ಮಧ್ಯರಾತ್ರಿ.. ಅಂದ್ರೆ 1.20 ರ ಸುಮಾರು.. 136 ಪ್ರಯಾಣಿಕರನ್ನು ಹೊತ್ತಿದ್ದ Air India Express Boeing 737-800 ತಿರುಚ್ಚಿ ವಿಮಾನ ನಿಲ್ದಾಣದಿಂದ ದುಬೈನತ್ತ ಪ್ರಯಾಣಿಸಲು ಹೊರಟಿತ್ತಷ್ಟೇ..

ರನ್​ ವೇನಲ್ಲಿ ಗಂಟೆಗೆ 250 ಕಿಲೋ ಮೀಟರ್ ವೇಗದಲ್ಲಿ ಬಂದ ಏರ್ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ಮೇಲಕ್ಕೆ ಏರುವ ವೇಳೆ ಅಪಘಾತಕ್ಕೆ ಒಳಗಾಯಿತು. ವಿಮಾನ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದಿದೆ. ಇದರಿಂದ ವಿಮಾನದಲ್ಲಿ ಆರು ಮಂದಿ ಸಿಬ್ಬಂದಿ ಮಾತ್ರವಲ್ಲ, 130 ಪ್ರಯಾಣಿಕರ ಎದೆ ಕೂಡ ಝಲ್ ಎಂದಿದೆ. ಅಷ್ಟರಲ್ಲೇ ಸುಧಾರಿಸಿಕೊಂಡ ಪೈಲಟ್​, ಕಂಟ್ರೋಲ್ ರೂಮ್​​ಗೆ ಮಾಹಿತಿ ರವಾನಿಸಿದ್ದಾರೆ.

ಆದರೆ ಪೈಲಟ್ ವಿಮಾನದ ಹಾರಾಟಕ್ಕೆ ಯಾವ್ದೇ ತೊಂದರೆ ಆಗಿಲ್ಲ, ಸುಗಮವಾಗಿಯೇ ಸಂಚಾರ ಮಾಡುತ್ತಿದ್ದೇವೆ ಎಂದು ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನಿಸಿದ್ದಾರೆ. ನಂತ್ರ ಕಂಟ್ರೋಲ್ ರೂಮ್​ನಲ್ಲಿದ್ದ ಅಧಿಕಾರಿಗಳು ಮುಂಬೈಗೆ ಹೋಗುವಂತೆ ಸೂಚನೆ ನೀಡಿದ್ದಾರೆ. ಅದ್ರಂತೆ ಅಪಘಾತಕ್ಕೊಳಗಾಗಿದ್ದ ವಿಮಾನ ಸತತ 4 ಗಂಟೆಗಳ ಬಳಿಕ ಅಂದ್ರೆ 5.35 ಗಂಟೆ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

 

ಹಾನಿಗೊಳಗಾಗಿದ್ರೂ 4 ಗಂಟೆ ಪ್ರಯಾಣ..!
ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಿಬ್ಬಂದಿ ವಿಮಾನವನ್ನ ಪರಿಶೀಲನೆ ನಡೆಸಿದ್ದಾರೆ. ವಿಮಾನಕ್ಕೆ ಹಾನಿಯಾಗಿರೋದನ್ನ ಕಂಡು ಬೆಚ್ಚಿ ಬಿದ್ದಿದ್ದಾರೆ. ವಿಮಾನದ ಹಲವು ಭಾಗಗಳು ಬಿರುಕು ಬಿಟ್ಟಿತ್ತು. ವಿಮಾನದ ಆಂಟೆನಾ ಕೂಡ ಮುರಿದು ಹೋಗಿದೆ. ಇಷ್ಟೆಲ್ಲಾ ಹಾನಿಗೊಳಗಾದ್ರೂ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಹಾರಾಟ ನಡೆಸಿರೋದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಘಟನೆ ಬಗ್ಗೆ ವಿಮಾನಯಾನ ಸಚಿವ ಸುರೇಶ್ ಪ್ರಭು ಮಾಹಿತಿ ಕೇಳಿದ್ದಾರೆ. ಅಲ್ಲದೇ ತನಿಖೆಗೂ ಆದೇಶ ನೀಡಿದ್ದಾರೆ. ಇನ್ನು, ಏರ್ ಇಂಡಿಯಾ ಸಂಸ್ಥೆ ಈಗಾಗಲೇ ತನಿಖೆಯನ್ನ ಆರಂಭಿಸಿದೆ.