ಸಂಪುಟ ವಿಸ್ತರಣೆ: ಕಾಂಗ್ರೆಸ್​ಗೆ ತಲೆ ನೋವು, ವಿಳಂಬವಾದ್ರೆ ಆಪರೇಷನ್ ಕಮಲದ ಭೀತಿ..!

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರಕಾರ ರಚಿಸಿಕೊಂಡು ಅಸ್ತಿತ್ವ ಉಳಿಸಿಕೊಂಡಿರುವ ಕಾಂಗ್ರೆಸ್​ ಇದೀಗ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಆಷಾಢ ಮಾಸ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡುವಂತೆ ಶಾಸಕರು, ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದೇ ಸಂಪುಟ ವಿಸ್ತರಣೆಯ ವಿಷಯವಾಗಿ ಹೈಕಮಾಂಡ್ ಗೊಂದಲದಲ್ಲಿ ಸಿಲುಕಿದೆ.
ಸಮ್ಮಿಶ್ರ ಧರ್ಮದ ಪ್ರಕಾರ ಕಾಂಗ್ರೆಸ್​ ಪಾಲಿಗೆ ಇನ್ನೂ ಆರು ಸಂಪುಟ ಸ್ಥಾನಗಳು ಖಾಲಿ ಇವೆ. ಆದರೆ ಇದಕ್ಕೆ ಒಂದು ಡಜನ್​ಗೂ ಹೆಚ್ಚು ಆಕಾಂಕ್ಷಿಗಳು ಕಾಯುತ್ತಿದ್ದಾರೆ.
ಒಂದು ವೇಳೆ, ಸಂಪುಟ ವಿಸ್ತರಿಸಿದರೆ ಸಚಿವ ಸ್ಥಾನ ವಂಚಿತರಿಂದ ಮತ್ತೆ ಅಸಮಾಧಾನ ಏಳಲಿದೆ ಎಂಬ ಆತಂಕ ಹೈಕಮಾಂಡ್​ನದ್ದಾಗಿದೆ. ತಕ್ಷಣಕ್ಕೆ ಇದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಭಯವೂ ಆವರಿಸಿದೆ. ಇನ್ನು, ಸಂಪುಟ ವಿಸ್ತರಿಸದೇ ಇದ್ದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಅನುಮಾನವೂ ದಟ್ಟವಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್​ 13ರಂದು ಬೀದರ್ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಆ ಭೇಟಿಯ ಬಳಿಕವೇ ಪಕ್ಷವು ಒಂದು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv