ವಾಟ್ಸ್​ ಆ್ಯಪ್​: ಇನ್ನು ಒಟ್ಟಿಗೇ ಐದಕ್ಕಿಂತ ಹೆಚ್ಚು ಮೆಸೇಜ್​ ಕಳಿಸುವಂತಿಲ್ಲ..!

ನವದೆಹಲಿ: ಸಾಮಾಜಿಕ ಜಾಲತಾಣ ಮನುಷ್ಯನ ಅಭಿವ್ಯಕ್ತಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ಕ್ರಾಂತಿಯನ್ನುಂಟು ಮಾಡಿದೆ. ಆದರೆ ಕ್ರಮೇಣ ಅದು ದುರ್ಬಳಕೆಯಾಗುತ್ತ ಬಂದು, ವದಂತಿಗಳನ್ನು ಹರಡುವ ತಾಣವಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್,​ ಇತ್ತೀಚೆಗೆ ದೇಶದಲ್ಲಿ ಮಕ್ಕಳ ಕಳ್ಳರ ವದಂತಿ ಹಾಗೂ ಗೋರಕ್ಷಣೆಯ ಹೆಸರಿನಲ್ಲಿ ಉಂಟಾಗುತ್ತಿರುವ ಸಾಮೂಹಿಕ ಹಿಂಸೆಯ ಕುರಿತು ಕಳವಳ ವ್ಯಕ್ತಪಡಿಸಿ, ಅದನ್ನು ತಡೆಗಟ್ಟಲು ಕಾಯ್ದೆ ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಸಾಮಾಜಿಕ ಜಾಲತಾಣ ವಾಟ್ಸ್​ ಆ್ಯಪ್​​ಗೆ ಸಾಮೂಹಿಕ ಹಿಂಸೆಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಾಟ್ಸ್ ಆ್ಯಪ್​​​ ಸುಳ್ಳು ಸುದ್ದಿಗಳ ಹರಡುವಿಕೆಗೆ ಕಡಿವಾಣ ಹಾಕಲು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಭಾರತದಲ್ಲಿ ಒಟ್ಟಿಗೇ ಐದಕ್ಕಿಂತ ಹೆಚ್ಚು ಮೆಸೇಜ್​ಗಳನ್ನು ಕಳುಹಿಸುವುದನ್ನು ಪ್ರಯೋಗಾರ್ಥವಾಗಿ ವಾಟ್ಸ್​​ ಆ್ಯಪ್​​ ನಿರ್ಬಂಧಿಸಿದೆ. ಅಲ್ಲದೇ ಆ್ಯಪ್​​ನಲ್ಲಿಯ ಕ್ವಿಕ್​ ಫಾರ್ವರ್ಡ್​ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ಜೊತೆಗೆ ನೀವು ಯಾವುದೇ ಆರ್ಟಿಕಲ್​​, ಫೋಟೋ, ವಿಡಿಯೋ ಫಾರ್​ವರ್ಡ್​ ಮಾಡಿದ್ರೆ, ಅದು ಫಾರವರ್ಡ್​ ಅಂತಾ ಮೆಸೇಜ್​​ನಲ್ಲಿ ತೋರಿಸುತ್ತೆ. ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಗಟ್ಟಲು ಈ ರೀತಿ ಕ್ರಮವನ್ನು ಕೈಗೊಂಡಿದ್ದಾಗಿ ವಾಟ್ಸ್​ಆ್ಯಪ್ ತಿಳಿಸಿದೆ.
ಇನ್ನೊಂದೆಡೆ ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದು ತರುವ ಯತ್ನ ಇದು ಅಂತಾ ಸೋಶಿಯಲ್​ ಮೀಡಿಯಾದಲ್ಲಿ ಜನರು ಆರೋಪಿಸ್ತಾ ಇದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv