ಬಾಂಬರ್ಸ್​​ ನೆಲದಲ್ಲಿ ಬೌಲರ್ಸ್..!, ಅಫ್ಘಾನಿಸ್ತಾನ್​​ ಕ್ರಿಕೆಟ್​ ಕಹಾನಿಯಿದು..!

ಅದು 1980ರ ದಶಕ. ಈ ವೇಳೆಯಲ್ಲಿ ಭಾರತ ತನ್ನ ಮೊಟ್ಟಮೊದಲ ವಿಶ್ವಕಪ್​ ಎತ್ತಿಹಿಡಿದಿತ್ತು. ಇಂಗ್ಲೆಂಡ್​, ಭಾರತ, ಪಾಕಿಸ್ತಾನ್​, ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ- ಈ ರಾಷ್ಟ್ರಗಳಲ್ಲಿ ಕ್ರಿಕೆಟ್​ ಎಂಬುದು ಉತ್ತುಂಗದ ಶಿಖರದಲ್ಲಿತ್ತು. ಆದ್ರೆ, ಅಫ್ಘಾನಿಸ್ತಾನ್​ ಎಂಬ ಪುಟ್ಟ ರಾಷ್ಟ್ರದಲ್ಲಿ ಇದ್ದ ಪರಿಸ್ಥಿತಿಯೇ ಬೇರೆ..!

1980ರ ದಶಕ: ಪ್ಲ್ಯಾಸ್ಟಿಕ್​ ಚೆಂಡಿನಿಂದ ಟೆನಿಸ್​ ಬಾಲ್​ವರೆಗೆ
ಉಳಿದ ರಾಷ್ಟ್ರಗಳಲ್ಲಿ ಬ್ಯಾಟ್​ ಹಾಗೂ ಬಾಲ್​​ಗಳು ನಲಿದಾಡ್ತಿದ್ರೆ, ಅಫ್ಘಾನ್​ ಮಾತ್ರ ಗನ್​ ಹಾಗೂ ಬಾಂಬ್​​ಗಳಿಂದ ತತ್ತರಿಸಿತ್ತು. 80ರ ದಶಕದಲ್ಲಿ ಅಫ್ಘಾನಿಸ್ತಾನ್​​ ನೆಲದಲ್ಲಿ ಬ್ಯಾಟು-ಬಾಲ್​​ಗಳ ಗಂಧ ಗಾಳಿಯೂ ಇರಲಿಲ್ಲ. ಬದಲಾಗಿ, ಯುದ್ಧಗಳಿಂದ ಸುಸ್ತಾಗಿದ್ದ ಅಲ್ಲಿನ ಜನ ಅಫ್ಘಾನಿಸ್ತಾನ ಬಿಟ್ಟು ಪಾಕಿಸ್ತಾನದೆಡೆಗೆ ಸೂರು ಹುಡುಕಿಕೊಂಡು ಹೆಜ್ಜೆ ಹಾಕಿದ್ದರು.
1988ರ ವೇಳೆಯಲ್ಲಿ ಪೇಷಾವರದತ್ತ ಸಾಗಿದ್ದ ಅಫ್ಘಾನ್​ ನಿರಾಶ್ರಿತರು ಪಾಕಿಸ್ತಾನ್​​ದೊಟ್ಟಿಗೆ ಬೆರೆಯತೊಡಗಿದರು. ಈ ವೇಳೆ ಅಲ್ಲಿನ ತಾಜ್​ ಮಲಿಕ್​ ಎಂಬ ನಿರಾಶ್ರಿತ ಬಾಲಕ ಕ್ರಿಕೆಟ್​​ನ ಸಂಪರ್ಕಕ್ಕೆ ಬಂದ. ತನ್ನ ಸಹೋದರರೊಟ್ಟಿಗೆ ಸೇರಿ ಪ್ಲ್ಯಾಸ್ಟಿಕ್​​ ಬ್ಯಾಗ್​​ಗಳನ್ನೇ ಸುತ್ತಿ ಸುತ್ತಿ ಚೆಂಡು ತಯಾರು ಮಾಡಿದ. ಕಟ್ಟಿಗೆ ತುಣುಕುಗಳಲ್ಲಿ ಬ್ಯಾಟ್​ ಆಕೃತಿಯನ್ನೂ ರಚಿಸಿದ. ಹೀಗೆ ಕ್ರಿಕೆಟ್​​ನ್ನ ಕಚ್ಚಾ ರೂಪದಲ್ಲಿ ಆಡಲು ಪ್ರಾರಂಭಿಸಿದ. ನಂತರ ಇದು ಟೆನಿಸ್​ ಬಾಲ್​ ಕ್ರಿಕೆಟ್​ವರೆಗೂ ಹೋಯಿತು.

1990ರ ದಶಕ: ಪೇಶಾವರದ ಕ್ಲಬ್​ನಿಂದ ಅಫ್ಘಾನ್​ ಕ್ರಿಕೆಟ್​ ಫೆಡರೇಶನ್​​ವರೆಗೆ
ವಾಪಸ್​​ ಅಫ್ಘಾನ್​ಗೆ ತೆರಳೋದು ಅಸಾಧ್ಯವಾಗಿದ್ದ ಆ ಸಮಯದಲ್ಲಿ, ತಾಜ್​ ಮಲಿಕ್ ನಿರಾಶ್ರಿತರ ಕ್ಯಾಂಪ್​​ನಲ್ಲೇ ದಿ ಅಫ್ಘನ್​ ಕ್ರಿಕೆಟ್​ ಕ್ಲಬ್​ ಸ್ಥಾಪಿಸಿದ. ಇನ್ನು, 90ರ ದಶಕದ ಆರಂಭದಲ್ಲಿ ಅಫ್ಘಾನ್​​ ರಾಷ್ಟ್ರ ತಾಲಿಬಾನ್​ ಕಪಿಮುಷ್ಠಿಯಲ್ಲಿತ್ತು. ಉಡುಗೆ ತೊಡುಗೆಗಳು ಕೂಡ ಕ್ರಿಕೆಟ್​​ನಂತಹ ಕ್ರೀಡೆಗಳಿಗೆ ನೆರವಾಗುವಂತೆ ಇರಲಿಲ್ಲ. ನಂತರ ಅಫ್ಘಾನಿಸ್ತಾನ್​​ದಲ್ಲಿ ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ, 1995ರ ವೇಳೆಗೆ ಅಲ್ಲಾ ದಾದ್​ ನೂರಿ ಎಂಬುವರು ದಿ ಅಫ್ಘಾನ್​ ಕ್ರಿಕೆಟ್​ ಫೆಡರೇಶನ್​ ಸ್ಥಾಪಿಸಿದ್ರು. ಈ ಹೊತ್ತಿಗೆ ಅಫ್ಘಾನ್​ ಕ್ರಿಕೆಟ್​ ಕ್ಲಬ್​ ಕೂಡ ಸ್ಥಾಪನೆಯಾಗಿ ಪೇಶಾವರ್​ ಲೀಗ್​​ಗಳಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಇಲ್ಲಿಂದ ಅಫ್ಘಾನ್​ ನಿಂತಿದ್ದೇ ಇಲ್ಲ. ಪೇಶಾವರ್​ದ ಬೃಹತ್​ ತಂಡಗಳನ್ನ ಸೋಲಿಸಿದ ಅಫ್ಘಾನ್​​​ರು ತಮ್ಮ ಕ್ರಿಕೆಟ್​ ಕ್ರೇಜ್​ ಅನ್ನ ಆಗಲೇ ತೋರ್ಪಡಿಸಿದ್ದರು.

2000ರ ದಶಕ: ಚಿಕ್ಕ ಪುಟ್ಟ ಗೆಲುವುಗಳಿಂದ ವಿಶ್ವಕಪ್​ ಅರ್ಹತಾ ಪಂದ್ಯಗಳವರೆಗೆ
ಅಫ್ಘಾನಿಸ್ತಾನ್​ ಕ್ರಿಕೆಟ್​ ಫೆಡರೇಶನ್​ ಸ್ಥಾಪನೆಯಾಗಿ ಆರು ವರ್ಷಗಳ ನಂತರ, ಅಂದರೆ 2000ರ ದಶಕದಲ್ಲಿ ಐಸಿಸಿ ಅಫ್ಘಾನಿಸ್ತಾನ್​​ಗೆ ಕ್ರಿಕೆಟ್​ ರಾಷ್ಟ್ರದ ಮಾನ್ಯತೆ ನೀಡಿತು. ಆಗ ಮೊಟ್ಟಮೊದಲ ಬಾರಿಗೆ ನಿರಾಶ್ರಿತರ ಕ್ಯಾಂಪ್​​ಗಳಲ್ಲಿ ಪ್ಲ್ಯಾಸ್ಟಿಕ್​ ಹಾಳೆ ಸುತ್ತಿ ಚೆಂಡು ತಯಾರಿಸಿದ್ದ ತಾಜ್​ ಮಲಿಕ್​ ಈಗ ಅಫ್ಘಾನ್​ ರಾಷ್ಟ್ರೀಯ ತಂಡದ ಕೋಚ್​ ಆಗಿ ನೇಮಕಗೊಂಡರು. ಕ್ರಿಕೆಟ್​​ನ ಸಾಕಷ್ಟು ಕ್ಲಬ್​​ಗಳನ್ನ, ಚಿಕ್ಕ ಪುಟ್ಟ ಏಶಿಯಾದ ರಾಷ್ಟ್ರಗಳನ್ನ ಮಣಿಸುತ್ತ ಸಾಗಿದ ಅಫ್ಘಾನ್​ ರಾಷ್ಟ್ರೀಯ ಕ್ರಿಕೆಟ್​ ತಂಡ 2008ರ ವೇಳೆಗೆ ಜಾಗತಿಕ ಕ್ರಿಕೆಟ್​ ವಲಯದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿತು. ಉಳಿದ ರಾಷ್ಟ್ರಗಳಿಗಿಂತ ಅಫ್ಘಾನ್​ ಕ್ರಿಕೆಟ್​ ತಂಡ ವಿಭಿನ್ನವಾಗಿ ನಿಲ್ಲಲು ಕಾರಣವಾಗಿದ್ದು, ಸಾಕಷ್ಟು ಮಹಕಾಂಕ್ಷೆ ಕೋಚ್​ ತಾಜ್​ ಮಲಿಕ್​ ಹಾಗೂ ಸ್ಫೂರ್ತಿದಾಯಕ ಕ್ಯಾಪ್ಟನ್​ ನವ್ರೋಜ್​ ಮಂಗಲ್​. ಛಲ ಬಿಡದ ಅಫ್ಘಾನ್​ ಕ್ರಿಕೆಟಿಗರು 2011ರ ವಿಶ್ವಕಪ್​ ಕ್ವಾಲಿಫೈರ್​​ನಲ್ಲಿ ಕೆನಡಾ ವಿರುದ್ಧ ಸೋತರೂ, ವಿಶ್ವದ ಕ್ರಿಕೆಟ್​​​ನಲ್ಲಿ ಮಿಂಚುವ ಭರವಸೆ ವ್ಯಕ್ತಪಡಿಸಿದರು.

2010ರ ದಶಕ: ಮೂರು ಬಾರಿ ವಿಶ್ವಕಪ್​ಗೆ ಎಂಟ್ರಿ, ಲಭಿಸಿದ ಟೆಸ್ಟ್​ ಮಾನ್ಯತೆ
ಕ್ರಿಕೆಟ್​​ನಲ್ಲಿ ತಮಗೆ ಪ್ರೊಫೆಶನಲ್​ ಟಚ್​ ಇಲ್ಲ ಎಂಬುದನ್ನ ಮನಗಂಡ ಅಫ್ಘಾನ್​​, ಆರಂಭದಿಂದ ಇದ್ದ ತಮ್ಮ ಕೋಚ್​ ತಾಜ್​ ಮಲಿಕ್​​ರನ್ನ ಬದಲಿಸಿ, ಪಾಕ್​​ನ ಮಾಜಿ ಟೆಸ್ಟ್​ ಕ್ರಿಕೆಟರ್​ ಕಬೀರ್​ ಖಾನ್​ ಅವರನ್ನ ಆಯ್ಕೆ ಮಾಡಿಕೊಂಡಿತು. ಇಲ್ಲಿಂದ ಕಚ್ಚಾ ಪ್ರತಿಭೆಗಳಾಗಿದ್ದ ಅಫ್ಘಾನ್​ ಕ್ರಿಕೆಟರ್ಸ್​ ಪ್ರೊಫೆಶನಲ್​ ಕ್ರಿಕೆಟರ್​ಗಳಾಗಿ ಬದಲಾದ್ರು. 2010ರ ದಶಕದಲ್ಲಿ ಅಫ್ಘಾನ್​​ ಕ್ರಿಕೆಟ್​​ನ ದಿಶೆಯೇ ಬದಲಾಯಿತು. 2010ರ ವಿಶ್ವಕಪ್​ ಟಿ20 ಕ್ವಾಲಿಫೈರ್​​ನಲ್ಲಿ ಗೆಲುವು ಪಡೆದ ಅಫ್ಘಾನಿಸ್ತಾನ್​, ವಿಶ್ವದ ದೊಡ್ಡ ದೊಡ್ಡ ಕ್ರಿಕೆಟ್​ ರಾಷ್ಟ್ರಗಳೊಂದಿಗೆ ಸೆಣಸಾಡುವ ಅರ್ಹತೆ ಪಡೆದರು. ಸಾಕಷ್ಟು ರಾಜಕೀಯ ಬದಲಾವಣೆ ಹಾಗೂ ಆರ್ಥಿಕ ಸಮಸ್ಯೆಗಳ ನಡುವೆಯೂ ಅಫ್ಘಾನ್​ ಕ್ರಿಕೆಟಿಗರು ಮೂರು ಬಾರಿ ವಿಶ್ವಕಪ್​ಗೆ ಅರ್ಹತೆ ಪಡೆದರು. ಒಂದು ಬಾರಿ ಟಿ20 ವಿಶ್ವಕಪ್​​ ಹಾಗೂ ಎರಡು ಬಾರಿ ಏಕದಿನ ವಿಶ್ವಕಪ್​​ಗಳಿಗೆ ಅಫ್ಘಾನಿಸ್ತಾನ್​ ಎಂಟ್ರಿ ಪಡೆಯಿತು. 2016ರ ಟಿ20 ವಿಶ್ವಕಪ್​​ನಲ್ಲಿ ಆಗಿನ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡವನ್ನ ಅಫ್ಘಾನಿಸ್ತಾನ್​ ಮಣಿಸಿತು. ನಂತರ ಜಿಂಬಾಬ್ವೆಗಳಂತಹ ರಾಷ್ಟ್ರಗಳನ್ನ ಸೋಲಿಸುವುದು ಅಫ್ಘಾನ್​ಗೆ ಯಾವ ಕಷ್ಟದ ವಿಷಯವೂ ಆಗಲಿಲ್ಲ. 2015ರ ಏಕದಿನ ವಿಶ್ವಕಪ್​ ಪಯಣ ಮುಗಿಸಿಕೊಂಡು ಬಂದ ಅಫ್ಘಾನಿಸ್ತಾನ್​ದಲ್ಲಿ ಮತ್ತೆ ಗನ್​ ಫೈರ್ ನಡೆಯಿತು. ಆದ್ರೆ, ಈ ಬಾರಿ ಯುದ್ಧಕ್ಕಾಗಿ ಅಲ್ಲ. ಬದಲಾಗಿ ಸಂಭ್ರಮ ವ್ಯಕ್ತಿಪಡಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿತ್ತು.

ಟೆಸ್ಟ್ ಮಾನ್ಯತೆ, ಭಾರತ ವಿರುದ್ಧ ಚೊಚ್ಚಲ ಟೆಸ್ಟ್​​
ಹೀಗೆ ನಿರಂತರವಾಗಿ ತಮ್ಮ ಕ್ರಿಕೆಟ್​​ ಮಹತ್ವಾಕಾಂಕ್ಷೆಯನ್ನ ವ್ಯಕ್ತಪಡಿಸಿದ ಅಫ್ಘಾನಿಸ್ತಾನ್​​ಗೆ ಐಸಿಸಿ 2017ರಲ್ಲಿ ಟೆಸ್ಟ್​ ಆಡುವ ರಾಷ್ಟ್ರವಾಗಿ ಘೋಷಿಸಿತು. ಅದರಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐತಿಹಾಸಿಕ ಪಂದ್ಯವನ್ನ ಅಫ್ಘಾನಿಸ್ತಾನ್​ ಆಡಲಿದೆ. ತನ್ನ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ನಂ. 1 ರಾಂಕಿಂಗ್​​ನಲ್ಲಿರುವ ಭಾರತ ತಂಡವನ್ನ ಅದು ಎದುರಿಸಲಿದೆ.

2019ರ ವಿಶ್ವಕಪ್​​ಗೂ ಲಗ್ಗೆ ಇಟ್ಟ ಅಫ್ಘಾನಿಸ್ತಾನ್​​
ಇದೇ ವರ್ಷ ಫೆಬ್ರವರಿಯಲ್ಲಿ ಜಿಂಬಾಬ್ವೆಯಲ್ಲಿ ನಡೆದ ವಿಶ್ವಕಪ್​ ಕ್ವಾಲಿಫೈರ್​ ಪಂದ್ಯಗಳಲ್ಲಿ ನಿರಂತರ ಗೆಲುವುಗಳನ್ನ ದಾಖಲಿಸಿದ ಅಫ್ಘಾನಿಸ್ತಾನ್​, ಈ ಟೂರ್ನಿಯಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನೂ ಹಿಂದಿಕ್ಕಿ ನಂ. 1 ಸ್ಥಾನ ಗಳಿಸಿದ್ದಲ್ಲದೇ, 2019ರ ವಿಶ್ವಕಪ್​​ಗೆ ಲಗ್ಗೆ ಇಟ್ಟಿತು. ಉಗ್ರರ ಅಟ್ಟಹಾಸಕ್ಕೆ ಅಫ್ಘಾನಿಸ್ತಾನ್​ ನಲುಗಿಹೋಗಿರಬಹುದು. ಆದರೆ, ಕ್ರಿಕೆಟ್​ ಎಂಬ ಕ್ರೀಡೆಯೊಂದು ಇಡೀ ರಾಷ್ಟ್ರದ ಒಗ್ಗಟ್ಟಿಗೆ ಚುಂಬಕ ಶಕ್ತಿಯಾಗಿದೆ. ಇದೀಗ ಅಫ್ಘಾನಿಸ್ತಾನ್​​ದ ಮೂಲೆ ಮೂಲೆಗಳಿಂದಲೂ ಅಂತರಾಷ್ಟ್ರೀಯ ಗುಣಮಟ್ಟದ ಆಟಗಾರರು ಹೊರಹೊಮ್ಮುತ್ತಿದ್ದಾರೆ. ಅದರಲ್ಲೂ ರಶೀದ್ ಖಾನ್​, ಮೊಹಮ್ಮದ್ ನಬಿ ಹಾಗೂ ಕೇವಲ 17 ವರ್ಷದ ಆಟಗಾರ ಮುಜೀಬ್​ ಉರ್​​ ರಹಮಾನ್​ ಅವರಂತೂ ಈಗಾಗಲೇ ವಿಶ್ವದ ಸ್ಟಾರ್​ ಪ್ಲೇಯಸ್ಟ್​​​​ಗಳಲ್ಲಿ ಟಾಪ್​ ಸ್ಥಾನಗಳಲ್ಲಿ ಗುರುತಿಸಲ್ಪಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv