ತಾಲಿಬಾನ್​​ಗೆ ಪಾಕಿಸ್ತಾನದ ಪೋಷಣೆ, ವಿಶ್ವಸಂಸ್ಥೆಗೆ ದೂರು ನೀಡಿದ ಅಫ್ಘಾನಿಸ್ತಾನ..!

ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ನೇರವಾಗಿ ವಿಶ್ವಸಂಸ್ಥೆಗೆ ದೂರು ನೀಡಿದೆ. ಪಾಕಿಸ್ತಾನವು ತಾಲಿಬಾನ್ ಭಯೋತ್ಪಾದನೆ​ ಸಂಘಟನೆ ಜೊತೆಗಿನ ಸಂಬಂಧವೇ ಇದಕ್ಕೆ ಕಾರಣವಾಗಿದೆ. ಇದರೊಂದಿಗೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನ ಪೋಷಿಸುತ್ತಿರುವುದು ಮತ್ತೆ ಮತ್ತೆ ಸಾಬೀತಾದಂತಾಗಿದೆ.

ಅಫ್ಘಾನಿಸ್ತಾನದಲ್ಲಿ ನೆಲೆಯೂರಿರುವ ತಾಲಿಬಾನ್ ಉಗ್ರ ಸಂಘಟನೆಯ ಜೊತೆ ಮಾತುಕತೆಗೆ ಮುಂದಾಗಿರುವ ಪಾಕಿಸ್ತಾನ, ಅಸಲಿಗೆ ಅಫ್ಘಾನಿಸ್ತಾನ ಸರ್ಕಾರವನ್ನೇ ಪಕ್ಕಕ್ಕಿಟ್ಟು ನೇರಾ ನೇರಾ ಮಾತುಕತೆಗೆ ಇಳಿದಿದೆ. ಇದು ಅಫ್ಘಾನಿಸ್ತಾನದ ಆಂತರಿಕ ಭದ್ರತೆಯ ವಿಚಾರ. ಇದು ವಿಶ್ವಸಂಸ್ಥೆಯ ನೀತಿಗೂ ವಿರುದ್ಧವಾಗಿದೆ. ನಮ್ಮೊಂದಿಗೆ ಮೊದಲು ಮಾತುಕತೆ ನಡೆಸಬೇಕಿತ್ತು ಎಂದು ಅಫ್ಘಾನಿಸ್ತಾನ ತಾಕೀತು ಮಾಡಿದೆ.

ಖತಾರ್​​​ನ ದೋಹಾದಲ್ಲಿರುವ ತಾಲಿಬಾನ್​ ಪ್ರಧಾನ ಕಚೇರಿ
ಖತಾರ್​​​ನ ದೋಹಾದಲ್ಲಿರುವ ತಾಲಿಬಾನ್​ ಕಚೇರಿ

ಅಫ್ಘಾನಿಸ್ತಾನದಲ್ಲಿನ ಶಾಂತಿ ಮಾತುಕತೆಯ ಭಾಗವಾಗಿ ನಾಳೆ ಸೋಮವಾರ ಇಸ್ಲಮಾಬಾದ್​​ನಲ್ಲಿ ಅಮರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ಅಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸಂಬಂಧಗಳ ಬಗ್ಗೆಯೂ ಪ್ರಧಾನಿ ಇಮ್ರಾನ್​ ಖಾನ್​ ಜೊತೆ ಸಮಗ್ರವಾಗಿ ಚರ್ಚೆಗಳನ್ನು ನಡೆಸುವುದಾಗಿಯೂ ತಾಲಿಬಾನ್​​ ಸಂಘಟನೆ ಮುಖಂಡರು ಈಗಾಗಲೇ ಘೋಷಿಸಿದ್ದಾರೆ.

ತಾಲಿಬಾನ್ ಉಗ್ರರ ಈ ಉದ್ಧಟತನ ಮತ್ತು ಇದಕ್ಕೆ ಸಮ್ಮತಿ ನೀಡುವ ಮೂಲಕ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದು ಅಫ್ಘಾನಿಸ್ತಾನಕ್ಕೆ ತೀವ್ರ ಆಕ್ರೋಶ ತರಿಸಿದೆ. ಪಾಕಿಸ್ತಾನದ ಈ ನಡೆಯಿಂದ ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಾಗಿದೆ ಎಂದು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಅಫ್ಘಾನಿಸ್ತಾನ ಕಿಡಿಕಾರಿದೆ.

ಪ್ರಧಾನಿ ಇಮ್ರಾನ್​ ಖಾನ್ ಹೀಗೆ ತಾಲಿಬಾನ್​​ಗೆ ಖುದ್ದಾಗಿ ಆಹ್ವಾನ ನೀಡಿರುವುದರಿಂದ ಅದು ಅಫ್ಘಾನಿಸ್ತಾನಕ್ಕೆ ಕಂಟಕವಾಗಿರುವ ತಾಲಿಬಾನ್ ಭಯೋತ್ಪಾದಕತೆಯನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗುವುದಿಲ್ಲವೇ? ಮತ್ತು ತಾಲಿಬಾನ್​​ ಸಂಘಟನೆಗೆ ಅಧಿಕೃತವಾಗಿ ಮಾನ್ಯತೆ ನೀಡಿದಂತಾಗುವುದಿಲ್ಲವೇ? ಎಂದು ಅಫ್ಘಾನಿಸ್ತಾನ ಕೆಂಡ ಕಾರಿದೆ.

ಇದನ್ನೂ ಓದಿ:  ಪಾಕ್​ನಿಂದ ಬರುತ್ತಿದ್ದ ಸಿಮೆಂಟ್​​ ಲಾರಿಯಲ್ಲಿ 10ಸಾವಿರ ಕೆಜಿ ಸ್ಫೋಟಕ, ಬೆಚ್ಚಿಬಿದ್ದ ಅಫ್ಘಾನಿಸ್ತಾನ..!

ತಾಲಿಬಾನ್ ಭಯೋತ್ಪಾದಕರು ಅಫ್ಘಾನಿಸ್ತಾನದಲ್ಲಿ ಭಯೋತ್ಪಾಕ ಕುಕೃತ್ಯಗಳಲ್ಲಿ ನಿರತರಾಗಿದ್ದಾರೆ. ಜೊತೆಗೆ, ಅಲ್ಲಿನ ಪಾಶ್ಚಿಮಾತ್ಯ ಸೇನಾಪಡೆಗಳಿಗೂ ಕಂಟಕವಾಗಿದ್ದಾರೆ. ಅಂತಹುದರಲ್ಲಿ ಪಾಕಿಸ್ತಾನವು ತಾಲಿಬಾನ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಕಾಬೂಲ್​ ಮತ್ತು ವಾಷಿಂಗ್ಟನ್​​ ಕೆಂಡಕಾರಿದೆ. ಅಫ್ಘಾನಿಸ್ತಾನ ಸರ್ಕಾರವು ಪಾಶ್ಚಿಮಾತ್ಯ ಪಡೆಗಳ ಕೈಗೊಂಬೆಯಾಗಿದೆ. ಹಾಗಾಗಿ ಅದರೊಂದಿಗೆ ತಾನು ಮಾತುಕತೆ ನಡೆಸುವುದಿಲ್ಲ ಎಂದು ತಾಲಿಬಾನ್ ಉದ್ಧಟತನ ತೋರಿದೆ.

2001ರ ಅಕ್ಟೋಬರ್​​ನಿಂದ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಲ್ಲಿವೆ. ಅಲ್ಲಿನ ತಾಲಿಬಾನ್​ ಆಡಳಿತಕ್ಕೆ ಮಣ್ಣುಮುಕ್ಕಿಸಿ, ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಅಮೆರಿಕ, ತದನಂತರ ತಾಲಿಬಾನ್​ ಉಗ್ರರ ಮೇಲೆ ನಿಗಾವಹಿಸಲು ಅಲ್ಲೇ ಬೀಡುಬಿಟ್ಟಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv