ಹಣ, ಹೆಂಡ ಹಂಚಿ ಹುಚ್ಚತನ ಮಾಡೋ‌ ಬದಲು ನಮ್ಮ ತತ್ವವೇ ಸರಿ ಇದೆ: ಉಪೇಂದ್ರ

ವಿಜಯಪುರ: ವಿಜಯಪುರ ಎಸ್.ಸಿ ಮೀಸಲು ಕ್ಷೇತ್ರದ ಲೋಕಸಭೆಯ ಪ್ರಜಾಕೀಯ ಅಭ್ಯರ್ಥಿ ಗುರುಬಸವ ರಬಕವಿ ಪರ ಪ್ರಚಾರಕ್ಕೆ ಇಂದು ನಟ, ಪಕ್ಷದ ಸ್ಥಾಪಕ ಉಪೇಂದ್ರ ಆಗಮಿಸಿದ್ದರು. ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈ ಬಾರಿ ಎಲ್ಲರನ್ನೂ ರೆಡಿ ಮಾಡಿ ನಿಲ್ಲಿಸುವ ಕೆಲಸ ಜಾಸ್ತಿ ಇದ್ದಿದ್ದರಿಂದ ನಾನು ಸ್ಪರ್ಧಿಸಿಲ್ಲ. ಪ್ರಜಾಕೀಯದಲ್ಲಿ ಹೆಸರು, ಹಣ, ಜಾತಿ ಯಾವುದೂ ಮುಖ್ಯವಾಗಲ್ಲ. ರಾಜರಿಂದ ಪ್ರಜೆಗಳಿಗೆ ಕೀ ಕೊಡುವ ಕೆಲಸ ಪ್ರಜಾಕೀಯ ಮಾಡಲಿದೆ. ಐದು ವರ್ಷಗಳ‌ ಕಾಲ ಅಧಿಕಾರ ಪ್ರಜೆಗಳ ಬಳಿಯೇ ಇರಲಿದೆ. ರಾಜ್ಯದಲ್ಲಿ 27 ಕಡೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಪ್ರಜಾಕೀಯಕ್ಕೆ ಸಾಕಷ್ಟು ಯುವಕರು ಬೆಂಬಲ‌ ನೀಡುತ್ತಿದ್ದಾರೆ. ಈಗಿರುವ ರಾಜಕೀಯವನ್ನು ತಳಮಟ್ಟದಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ‌ ಮೇಲ್ಭಾಗದಿಂದ ಬದಲಾವಣೆ ಮಾಡಲು ಹೊರಟಿದ್ದೇವೆ. ಸಾಧ್ಯವಾದಕಡೆಗಳಲ್ಲಿ ಪ್ರಚಾರ ಮಾಡ್ತಿದ್ದೇವೆ. ಇದುವರೆಗೂ ಎಲ್ಲರೂ ಹಣ, ಹೆಂಡ ತೋರಿಸಿಕೊಂಡೆ ಬರುತ್ತಿದ್ದಾರೆ. ಈ ಬಾರಿ ಜನ ನಮಗೆ ಎಷ್ಟು ಸಹಕಾರ ನೀಡ್ತಾರೆ ನೊಡೋಣ. ಪ್ರಜಾಕೀಯದಲ್ಲಿ ಪ್ರಜೆಗಳೆ ಪ್ರಭುಗಳು. ಜನಗಳಿಗ ಏನು ಬೇಕು ಅಂತಾ ಮಾತಾಡಿದ್ರೆ ಅದನ್ನು ಹುಚ್ಚತನ ಅನ್ನೋದಾದ್ರೆ ಅದೇ ಬೇಕು. ಹಣ, ಹೆಂಡ ಹಂಚಿ ಹುಚ್ಚತನ ಮಾಡೋ‌ ಬದಲು ನಮ್ಮ ತತ್ವವೇ ಸರಿ ಇದೆ. ನಮ್ಮ ಅಭ್ಯರ್ಥಿಗಳು ಗೆದ್ದಲ್ಲಿ, ಸ್ವಂತ ನಿರ್ಧಾರ ತಗೋಳೋದಿಲ್ಲ. ಜನರ ಬಳಿ ಬಂದು ಕೇಳ್ತೆವೆ, ಅವರು ಹೇಳಿದ ಪಾರ್ಟಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv