ನಾವು ಗೆದ್ರೆ ಯಾರನ್ನ ಬೆಂಬಲಿಸಬೇಕು ಎಂಬುದನ್ನ ಜನ ನಿರ್ಧರಿಸ್ತಾರೆ: ಉಪೇಂದ್ರ

ಕಲಬುರ್ಗಿ: ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ, ಚಿತ್ರನಟ ಉಪೇಂದ್ರ ಇಂದು ಕಲಬುರ್ಗಿಗೆ ಆಗಮಿಸಿದ್ದರು. ಕಲಬುರ್ಗಿ ‌ಲೋಕಸಭಾ ಕ್ಷೇತ್ರದ ಯುಪಿಪಿ ಅಭ್ಯರ್ಥಿ ಮಹೇಶ ಲಂಬಾಣಿ ಪರ ಪ್ರಚಾರಕ್ಕೆ ಆಗಮಿಸಿದ್ದ ನಟ ಉಪೇಂದ್ರ ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ನಟ ಉಪೇಂದ್ರ, ‘ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವವನು ರಾಜಕಾರಣಿ. ಗೆದ್ದ ನಂತರ ಪ್ರಜೆಗಳ ಸಂಪರ್ಕದಲ್ಲಿ ನಿರಂತರವಾಗಿ ಇರುವವನು ಪ್ರಜಾಕಾರಣಿ’ ಎಂದು ಹೇಳಿದರು. ತೋಳ್ಬಲ, ಹಣಬಲ, ಜಾತಿಬಲವಿಲ್ಲದೆ ರಾಜಕೀಯ ಪ್ರವೇಶ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು‌. ರಾಜಕಾರಣದಲ್ಲಿ ವೃತ್ತಿಪರತೆ ತರಲು ಪಕ್ಷವನ್ನು ಸ್ಥಾಪಿಸಿದ್ದು ಪಕ್ಷದ ಅಭ್ಯರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅವರು ಗೆದ್ದ ಬಳಿಕ ಸಂಸದರಾಗುವುದಿಲ್ಲ, ಮತ ಹಾಕಿದವರ ಕೆಲಸಗಾರರಾಗುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು’ ಎಂದು ತಿಳಿಸಿದರು. ಯುಪಿಪಿ ಅಭ್ಯರ್ಥಿ ಗೆದ್ದರೆ ಸಂಸತ್‌ನಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದರು‌ ‘ದೇಶದ ಶೇ 80ರಷ್ಟು ಜನರು ದುರ್ಬಲರಾಗಿದ್ದಾರೆ. ಶೇ 20ರಷ್ಟು ಜನರು ಮಾತ್ರ ಪ್ರಬಲರಾಗಿದ್ದಾರೆ. ಹೀಗಾಗಿ ದುರ್ಬಲರು ಪ್ರಬಲರ ಸುತ್ತ ಗಿರಕಿ ಹೊಡೆಯಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ಆದರೆ, ರಾಜಕೀಯದಲ್ಲಿ ಮಾತ್ರ ಏನೂ ಬದಲಾಗಿಲ್ಲ’ ಎಂದರು. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೀರಿ, ಪ್ರತಿಸ್ಪರ್ಧಿಗಳ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, ‘ಪ್ರತಿಪಕ್ಷಗಳ ಬಗ್ಗೆ ಯೋಚನೆ ಮಾಡಿದರೆ ಅದು ರಾಜಕೀಯ. ಪ್ರಜೆಗಳ ಬಗ್ಗೆ ಯೋಚನೆ ಮಾಡಿದರೆ ಅದು ಪ್ರಜಾಕೀಯ. ನಮ್ಮದು ರಾಜಕೀಯ ಪಕ್ಷವಲ್ಲ; ಪ್ರಜಾಕೀಯ ಪಕ್ಷ’ ಎಂದು ಉತ್ತರಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv