ಅಂಬಿ, ವಿಷ್ಣು, ಅಪ್ಪಾಜಿ ಸ್ಮಾರಕ ಒಂದೇ ಕಡೆ ಇರಲಿ!

ಡಾ.’ರಾಜ್​ಕುಮಾರ್’ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ. ನಾಡಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರೋ ಆರಾಧ್ಯ ದೈವ. ಎಂತಹ ಪಾತ್ರವಾದ್ರೂ ಜೀವತುಂಬಿ ಅಭಿನಯಿಸೋ ‘ನಟಸಾರ್ವಭೌಮ’ನಿಗೆ ಇಂದು 91 ನೇ ಜನ್ಮದಿನದ ಸಂಭ್ರಮ. ಮೆಚ್ಚಿನ ನಟನ ಹುಟ್ಟು ಹಬ್ಬವನ್ನು ನಾಡಿನ ಅಭಿಮಾನಿಗಳು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ. ಮೇರು ನಟನ ವ್ಯಕ್ತಿತ್ವ ಗುಣಗಾನ ಮಾಡುತ್ತಿದ್ದಾರೆ. ಇದೀಗ ರಾಜ್ ಹಿರಿಯ ಮಗ ಶಿವರಾಜ್​ಕುಮಾರ್​ ಅಪ್ಪಾಜಿಯ ಹುಟ್ಟುಹಬ್ಬದಲ್ಲಿ ಕೆಲ ಇಂಟಸ್ಟಿಂಗ್ ಕಹಾನಿ ಬಿಚ್ಚಿಟ್ಟಿದ್ದಾರೆ.

ರಾಜ್ ಕುಟುಂಬದಲ್ಲಿ ಹುಟ್ಟಿರೋದೆ ನನ್ನ ದೊಡ್ಡ ಪುಣ್ಯ!
ಅಪ್ಪಾಜಿಯ ಸ್ಮಾರಕಕ್ಕೆ ನಮಿಸಿ ಮಾತನಾಡಿದ ಅವರು. ನಿಜ ಹೇಳಬೇಕೆಂದರೆ ರಾಜ್ ಕುಟುಂಬದಲ್ಲಿ ಹುಟ್ಟಿರೋದೇ ದೊಡ್ಡ ಪುಣ್ಯ. ಅಂತಹ ತಂದೆಯನ್ನು ಪಡೆದ ನನಗೆ ನಿಜಕ್ಕೂ ಹೆಮ್ಮೆಯಾಗುತ್ತೆ. ಅಪ್ಪಾಜಿಯ ಮೇಲೆ ಕೋಟ್ಯಂತರ ಅಭಿಮಾನಿಗಳು ಅಪಾರ ಪ್ರೀತಿ ಇಟ್ಟಿದ್ದಾರೆ. ಎಷ್ಟು ಕೋಟಿ ಕೊಟ್ಟರು ಇಂತಹ ಅಭಿಮಾನ ಸಿಗೋದಿಲ್ಲ. ಇನ್ನು ಇದೇ ದಿನ ಅಂಬಿಮಾಮನ 5 ನೇ ತಿಂಗಳ ಪುಣ್ಯತಿಥಿ ಇದೆ. ಅವರನ್ನು ಕಳೆದುಕೊಂಡಿರೋದು ಇವತ್ತು ತುಂಬಾನೇ ನೆನಪಾಗುತ್ತೆ ಅಂದ್ರು. ಶೂಟಿಂಗ್ ಇದ್ದಾಗಲು ಕೇಕ್​ ಕಟ್​ ಮಾಡಿ ನಾವೆಲ್ಲ ಅಪ್ಪಾಜಿಯ ಬರ್ತಡೇ ಮಾಡ್ತಿದ್ವಿ. ಅಪ್ಪಾಜಿ ಕೇಕ್​ಗೆ ಖರ್ಚು ಮಾಡೋದನ್ನು ನೋಡಿ ತುಂಬಾನೇ ಬೈಯ್ತಾಯಿದ್ರು. ಚಿಕ್ಕಂದಿನಿಂದ ನಾವು ಅಪ್ಪಾಜಿ, ಅಂಬಿಮಾಮ, ವಿಷ್ಣುಮಾಮರನ್ನು ನೋಡಿಕೊಂಡು ಬೆಳೆದವರು. ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದವರು ಈ ತ್ರಿಮೂರ್ತಿಗಳು. ಇವರ ಆತ್ಮೀಯ ಗೆಳೆತನ ತುಂಬಾನೇ ದೊಡ್ಡದು ಅಂತಾ ಸಿನಿ ಲೆಜೆಂಡ್​​ಗಳ ಹಳೆಯ ನೆನಪುಗಳನ್ನು ಬಿಚ್ಚಿಟ್ರು. ಸುಮಲತಾ ಅಂಬರೀಶ್ ಕೂಡ ಅಪ್ಪಾಜಿಯ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ರು. ಸ್ಮಾರಕಕ್ಕಿಂತ ಅಭಿಮಾನಿಗಳ ಪ್ರೀತಿ, ಅಭಿಮಾನವೇ ದೊಡ್ಡದು. ಆದ್ರೂ ಈ ಮೂವರು ದಿಗ್ಗಜರ ಸ್ಮಾರಕಗಳು ಒಂದೇ ಕಡೆ ಆದ್ರೆ ತುಂಬಾನೇ ಖುಷಿಯಾಗುತ್ತೆ ಅಂತಾ ಹಳೆಯ ಸ್ನೇಹವನ್ನ ನೆನಪು ಮಾಡಿದ್ರು.