‘ಕವಲುದಾರಿ’ ರಿಷಿ ಬಾಳದಾರಿಯಲ್ಲಿ ನಿಶ್ಚಿತಾರ್ಥದ ಸಂಭ್ರಮ

ಇತ್ತೀಚೆಗಷ್ಟೇ ಕವಲುದಾರಿಯಲ್ಲಿ ಸಕ್ಸಸ್ ಕಂಡ ಆಪರೇಶನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಬಾಳದಾರಿಯಲ್ಲೂ ಸಂತಸದ ಮೆಟ್ಟಿಲೊಂದನ್ನ ಹತ್ತಿದ್ದಾರೆ. ಸ್ವಾತಿ ಅನ್ನುವವರ ಜೊತೆ ಹೈದರಾಬಾದ್‌ನಲ್ಲಿ ರಿಷಿ ನಿಶ್ಚಿತಾರ್ಥ ನೆರವೇರಿದೆ. ಈ ಖುಷಿಯನ್ನ ರಿಷಿ ಹೀಗೆ ಹಂಚಿಕೊಂಡಿದ್ದಾರೆ.

‘ಧನ್ಯವಾದಗಳು. ನೀವೆಲ್ಲರೂ ನನ್ನ ಕೆಲಸವನ್ನು ನೋಡಿ ಮೆಚ್ಚಿ ಪ್ರೋತ್ಸಾಹಿಸಿದ್ದೀರಿ. ನಿಮ್ಮ ಈ ಪ್ರೀತಿ ನನಗೆ ಇನ್ನಷ್ಟು ಒಳ್ಳೆ ಕೆಲಸಗಳ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಸ್ಫೂರ್ತಿ ಕೊಟ್ಟಿದೆ. ಈ ಗೆಲುವಿನ ಬೆನ್ನಲ್ಲೇ ನನ್ನ ವೈಯಕ್ತಿಕ ಜೀವನದಲ್ಲೂ ಒಂದು ಮಹತ್ತರ ಮೈಲಿಗಲ್ಲನ್ನು ಮುಟ್ಟಿದ್ದೇನೆಂದು ನಿಮ್ಮ ಬಳಿ ಹಂಚಿಕೊಳ್ಳಲು ನನಗೆ ಬಹಳ ಸಂತಸವಿದೆ. ನನ್ನ ಸಂಗಾತಿ ನನಗೆ ಸಿಕ್ಕಿದ್ದಾಳೆ. ಸ್ವಾತಿ, ಅವಳ ಹೆಸರು. ವೃತ್ತಿಯಿಂದ ಬರಹಗಾರ್ತಿ. ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾಳೆ. ನಮ್ಮಿಬ್ಬರ ಕುಟುಂಬದವರ ಆಶೀರ್ವಾದದಿಂದ, ಹೈದರಾಬಾದ್ ನಲ್ಲಿ ಒಂದು ಚಿಕ್ಕ ಸಮಾರಂಭದಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ರಿಲೀಸ್ ಕೆಲಸಗಳಲ್ಲಿ ತೊಡಗಿದ್ದರಿಂದ ನಿಶ್ಚಿತಾರ್ಥದ ವಿಚಾರವನ್ನು ಇವಾಗ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದು ಕೋರುತ್ತಾ, ಮದುವೆಯಲ್ಲಿ ನಿಮ್ಮನ್ನು ಭೇಟಿಯಾಗುವ ಆಶಯದೊಂದಿಗೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು
– ರಿಷಿ

ಇತ್ತೀಚೆಗೆ ಪಿಆರ್‌ಕೆ ಬ್ಯಾನರ್‌ನಡಿಯಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿರೋ ಕವಲುದಾರಿ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿರೋ ರಿಷಿ ಈ ಮೂಲಕ ಕನ್ನಡದ ಭರವಸೆಯ ನಟನಾಗಿದ್ದಾರೆ.