ತಿಂಗಳಿಗೂ ಮೊದಲೇ ಶುರುವಾಯ್ತು ದರ್ಶನ್​ ‘ಹುಟ್ಟುಹಬ್ಬ’ದ ಪರ್ವ..!

‘ಚಾಲೆಂಜಿಂಗ್ ಸ್ಟಾರ್’​ ದರ್ಶನ್​ ಏಳು ಕೋಟಿ ಕನ್ನಡಿಗರ ಪ್ರೀತಿ ಗೆದ್ದಿರೋ ‘ಯಜಮಾನ’. ಅಭಿಮಾನಿಗಳ ಪಾಲಿನ ಸುಲ್ತಾನ್ ಆಗಿರೋ ದಚ್ಚುಗೆ ಗಾಂಧಿನಗರದಲ್ಲಿ ಫ್ಯಾನಿಸಂ ದೊಡ್ಡದು. ಸಿನಿಮಾ ಬಂದರೂ, ಬರದಿದ್ದರೂ ದರ್ಶನ್​ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲ್ಲ. ಅಷ್ಟೊಂದು ಸ್ಥಿರವಾದ ಅಭಿಮಾನಿಗಳನ್ನು ಹೊಂದಿರೊ ಅಪರೂಪದ ನಟ​. ಅಂದ್ಹಾಗೆ ಮುಂದಿನ ತಿಂಗಳು ದರ್ಶನ್ ಹುಟ್ಟುಹಬ್ಬ. ಆದ್ರೆ ಈಗಾಗಲೇ ಅಭಿಮಾನಿಗಳು ‘ದರ್ಶನ್​ ಪರ್ವ’ ಆರಂಭಿಸಿದ್ದಾರೆ.
ಸಂಭ್ರಮಕ್ಕೆ ಕೌಂಟ್​ಡೌನ್ ಶುರು..!
ದರ್ಶನ್​ ಹುಟ್ಟುಹಬ್ಬ ಬಂತೆಂದರೇ ಅಭಿಮಾನಿಗಳ ಪಾಲಿಗೆ ಜಾತ್ರೆ. ಅಂದು ಸಾವಿರಾರು ಫ್ಯಾನ್ಸ್​, ದಾಸನನ್ನು ಭೇಟಿಯಾಗೋಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿ ಬರ್ತ್ ಡೇ ಆಚರಣೆಗೆ ಫ್ಯಾನ್ಸ್​​​ ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ತಿಂಗಳಿಗೂ ಮೊದಲೇ ‘ಬಾಸ್​ ಪರ್ವ.. ಸುಲ್ತಾನ್​​ ಸಂಭ್ರಮ’ ಹೆಸರಿನಲ್ಲಿ ಕೌಂಟ್​ಡೌನ್ ಆರಂಭಿಸಿದ್ದಾರೆ. ಅಲ್ಲದೇ ಫೆಬ್ರುವರಿ 16 ‘ಸುಲ್ತಾನ್​ ಸಂಭ್ರಮಾಚರಣೆ’ಗೆ ತಯಾರಿಯನ್ನೂ ನಡೆಸ್ತಿದ್ದಾರೆ. ಆದರೆ ‘ರೆಬೆಲ್ ಸ್ಟಾರ್​’ ಅಂಬಿ ಸಾವಿನಿಂದ ದರ್ಶನ್​ ಇನ್ನೂ ಹೊರಬಂದಿಲ್ಲ. ಆದ್ದರಿಂದ ದರ್ಶನ್​ ಹುಟ್ಟುಹಬ್ಬ ಆಚರಿಸಿಕೊಳ್ತಾರಾ..? ಇಲ್ಲವಾ..? ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಕಾಡ್ತಿದೆ.