ಲಾರಿ ಹಿಂದೆ ಹೋಗೋ ಮುಂಚೆ ಎಚ್ಚರ, ಟ್ರಕ್​ನಿಂದ ಆ್ಯಸಿಡ್ ಬಿದ್ದು ವ್ಯಕ್ತಿ ಗಂಭೀರ

ಬೆಂಗಳೂರು: ಆಕಸ್ಮಿಕವಾಗಿ ಬೈಕ್​ ಸವಾರನ ಮೇಲೆ ಆ್ಯಸಿಡ್​ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೇಗೂರಿನ ದೇವರಚಿಕ್ಕನಹಳ್ಳಿ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ಸೇಲ್ಸ್​ ಮ್ಯಾನ್ ಆಗಿದ್ದ ಬಿಕಾಸ್, ಮೊನ್ನೆ ಎಂದಿನಂತೆ ತಮ್ಮ ಬೈಕ್​​ ಏರಿ ಕೆಲಸಕ್ಕೆ ಹೋಗಿದ್ದರು. ಮೂಲತಃ ಬೆಂಗಳೂರಿನವರಾದ ಬಿಕಾಸ್, ನಗರದ ಬೇಗೂರಿನ ದೇವರ ಚಿಕ್ಕನಹಳ್ಳಿ ಬಳಿ ಹೋಗುತ್ತಿದ್ದರು. ಬೈಕ್​ನಲ್ಲಿ ಹೋಗುತ್ತಿದ್ದಾಗ ಮುಂದೆ ಆ್ಯಸಿಡ್​ ಕ್ಯಾನ್ ತುಂಬಿದ್ದ ತಮಿಳುನಾಡು ಮೂಲದ ಲಾರಿಯೊಂದು ಚಲಿಸುತ್ತಿತ್ತು.

ಈ ವೇಳೆ ಹಂಪ್ಸ್ ಒಂದು ಸಿಕ್ಕಿದ್ದು, ಲಾರಿ ಡ್ರೈವರ್ ಬ್ರೇಕ್ ಹಾಕಿದ್ದಾರೆ. ಆ್ಯಸಿಡ್ ತುಂಬಿದ್ದ ಲಾರಿಯ ಹಿಂಬದಿಯ ಡೋರ್ ಹಾಕಿರಲಿಲ್ಲ ಎನ್ನಲಾಗಿದೆ. ಹಂಪ್ ಸಿಕ್ತು ಅಂತಾ ಬ್ರೇಕ್ ಹಾಕಿದ ರಭಸಕ್ಕೆ ಆ್ಯಸಿಡ್ ಕ್ಯಾನ್​ವೊಂದು ಮಗುಚಿ ಬಿದ್ದಿದೆ. ಪರಿಣಾಮ ಬೈಕ್​ನಲ್ಲಿ ಚಲಿಸುತ್ತಿದ್ದ ಬಿಕಾಸ್ನ ಮುಖ, ಕೈ, ಕಾಲಿನ ಮೇಲೆ ಬಿದ್ದಿದೆ.

ಇದರಿಂದ ಗಾಯಗೊಂಡಿದ್ದ ಬಿಕಾಸ್​ರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮನೆಯಲ್ಲಿ ಹಾಸಿಗೆ ಹಿಡಿದಿರುವ ಬಿಕಾಸ್, ನರಕಯಾತನೆ ಅನುಭವಿಸುತ್ತಿದ್ದಾರೆ.

ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿಯನ್ನ ಸೀಜ್ ಮಾಡಿದ್ದಾರೆ. ಆದ್ರೆ ಘಟನೆ ನಡೆದ ಬೆನ್ನಲ್ಲೇ ಲಾರಿ ಚಾಲಕ ಎಸ್ಕೇಪ್ ಆಗಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.