ಎರಡು ಬಸ್​ ಮುಖಾಮುಖಿ ಡಿಕ್ಕಿ, ನಾಲ್ವರ ದುರ್ಮರಣ

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದ ಬಳಿ ಎರಡು ಕೆಎಸ್​ಆರ್​ಟಿಸಿ ಬಸ್​ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ದಾವಣಗೆರೆಯಿಂದ ಕಲಬುರ್ಗಿಗೆ ಆಗಮಿಸುತ್ತಿದ್ದ ಬಸ್​ ಹಾಗೂ ಜೇವರ್ಗಿಯಿಂದ ಯಡ್ರಾಮಿಗೆ ತೆರಳುತ್ತಿದ್ದ ಬಸ್​​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ದುರ್ಘಟನೆಯಲ್ಲಿ ಓರ್ವ ಸರ್ಕಾರಿ‌ ಬಸ್ ಚಾಲಕ ಹಾಗೂ ಮೂವರು ಶಿಕ್ಷಕಿಯರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರ್ಕಾರಿ ಬಸ್ ಚಾಲಕ ರುಕ್ಕಪ್ಪ ಯಶವಂತರಾಯ (45),  ಶಿಕ್ಷಕಿ ಆಯೇಷಾ ಸಿದ್ದಿಕಿ (40), ಫರೀನ್ ಬೇಗಂ (40) ಹಾಗೂ  ಸಹರಾ ಕಲತೂನ್(36) ಮೃತ ದುರ್ದೈವಿಗಳು. ಗಾಯಾಳುಗಳನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.