ಅಪಘಾತದ ರಭಸಕ್ಕೆ ಬೈಕ್​ನಲ್ಲಿ ಹೊತ್ತಿಕೊಂಡ ಬೆಂಕಿ: ಸವಾರ ಸಾವು

ಉಡುಪಿ: ಜಿಲ್ಲೆಯ ಮರವಂತೆ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಕಾರಿಗೆ, ಬೈಕ್ ಡಿಕ್ಕಿ ಹೊಡೆದಿದ್ದು, ಹೊಡೆತದ ರಭಸಕ್ಕೆ ಬೈಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡುನೋಡುತ್ತಿದ್ದಂತೆ ಬೆಂಕಿ ಹತ್ತಿ ಉರಿದು ಬೈಕ್​ ಸಂಪೂರ್ಣ ಭಸ್ಮಗೊಂಡಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಮೃತ ಯುವಕನನ್ನು ಬೈಂದೂರು ಬಳಿಯ ತಗ್ಗರ್ಸೆ ನಿವಾಸಿ ಮುತ್ತಯ್ಯ ಪೂಜಾರಿ ಅವರ ಪುತ್ರ ಪುನೀತ್ ಪೂಜಾರಿ (22) ಎಂದು ಗುರುತಿಸಲಾಗಿದ್ದು, ಗಾಯಾಳು ಆಕಾಶ್ ಪೂಜಾರಿ ಎಂದು ಗುರುತಿಸಲಾಗಿದೆ. ಗಾಯಳುವನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕುಂದಾಪುರದಿಂದ ಬೈಂದೂರು ಕಡೆಗೆ ಬರುತ್ತಿದ್ದ ಬೈಕ್ ಸವಾರರು, ನಾಗೂರಿನಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ಗೆ ಬೆಂಕಿ ತಗುಲಿ ಬೈಕ್ ಸಂಪೂರ್ಣ ಭಸ್ಮಗೊಂಡಿದೆ. ಕಾರಿನ ಮುಂಭಾಗಕ್ಕೂ ಬೆಂಕಿ ತಗುಲಿ ಸಾಕಷ್ಟು ನಷ್ಟ ಸಂಭವಿಸಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರ ಸಹಕಾರದೊಂದಿಗೆ ಬೈಕ್​ಗೆ ತಗುಲಿದ ಬೆಂಕಿಯನ್ನು ನಂದಿಸಿ, ಗಾಯಾಳನ್ನು ಅಂಬುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv