ತಹಶೀಲ್ದಾರ್​​ಗೆ ಅವಾಚ್ಯ ಪದಗಳಿಂದ ನಿಂದಿಸಿದ ಎಸಿಬಿ ಡಿವೈಎಸ್​​ಪಿ?

ಚಾಮರಾಜನಗರ: ಎಸಿಬಿ ಡಿವೈಎಸ್​​ಪಿ, ತಹಶೀಲ್ದಾರ್​​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಗುಂಡ್ಲುಪೇಟೆ ತಹಶೀಲ್ದಾರ್​​ ಸುದರ್ಶನ್​​​ ಎಂಬವರಿಗೆ ಎಸಿಬಿ ಡಿವೈಎಸ್​​ಪಿ ಪ್ರಸಾದ್​​ ದೂರವಾಣಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್​​ ಸುದರ್ಶನ್, ಪ್ರಸಾದ್​ ಅವರ ವಿರುದ್ಧ​​ ಗುಂಡ್ಲುಪೇಟೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ಡಿವೈಎಸ್​ಪಿ ಪ್ರಸಾದ್​ ತನಗೆ ನಿಂದಿಸಿದ್ದಾರೆ ಎನ್ನಲಾದ ಆಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ.

ಸಾರ್ವಜನಿಕರೊಬ್ಬರು ಕರೆ ಮಾಡಿ ಬೇಗೂರು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಬೀಟೆ ಮರ ಕಡಿಯುತ್ತಿದ್ದಾರೆಂದು ದೂರು ನೀಡಿದ್ದರು. ಈ ಬಗ್ಗೆ ವಾಸ್ತವ ಸ್ಥಿತಿ ತಿಳಿದು ಹೇಳಲು ಗ್ರಾಮ ಪಂಚಾಯ್ತಿ ಸದಸ್ಯ ಮಹದೇವ್​ ಅವರಿಗೆ ಹೇಳಿದ್ದೆ. ಬಳಿಕ ಪ್ರಸಾದ್​​ ಅವರು ನನಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನೀವ್ಯಾರು ಕಳಿಸಲು, ನಿಮಗೇನು ಅಧಿಕಾರವಿದೆ? ನಿಮ್ಮ ಡಿಸಿ ಹತ್ತಿರ ಬಂದು ಮಾತಾಡ್ತೀನಿ, ಅವರ ಅಪ್ಪನ ಹತ್ತಿರನೂ ಮಾತಾಡ್ತೀನಿ. ಬೂಟಿನಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಸುದರ್ಶನ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಬೆದರಿಕೆ ಹಾಗೂ ಮಾನನಷ್ಟ ಮೊಕದ್ದಮೆ  ದಾಖಲಿಸಿ ನ್ಯಾಯ ಕೊಡಿಸಬೇಕೆಂದು ಕೋರಿದ್ದಾರೆ.

ಡಿವೈಎಸ್​​ಪಿ ನಡೆಯನ್ನು ಖಂಡಿಸಿರುವ ಕೆಎಎಸ್​​ ಆಫೀಸರ್ಸ್​​ ಅಸೋಸಿಯೇಷನ್​​​, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಡಿವೈಎಸ್​ಪಿ ಪ್ರಸಾದ್​​ರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸುವುದಾಗಿ ಹೇಳಿದೆ.

ಗುಂಡ್ಲುಪೇಟೆ ತಹಶೀಲ್ದಾರ್​ ಸುದರ್ಶನ್​
ಡಿವೈಎಸ್​ಪಿ ಪ್ರಸಾದ್​