ಬುದ್ಧ, ಬಸವ, ಅಂಬೇಡ್ಕರ್​ ಹೆಸರಲ್ಲಿ ಪ್ರಮಾಣ ಮಾಡಿದ ಸಚಿವ ಎನ್​. ಮಹೇಶ್​ ಯಾರು..?

ನೀಲಿ ಬಣ್ಣದ ಸೂಟು.. ಮುಖದ ಮೇಲೆ ಮಂದಹಾಸದ ಮಹಾಗತ್ತಿನ ಜೊತೆಗೆ ವೇದಿಕೆ ಏರಿದ ವ್ಯಕ್ತಿ. ಸಚಿವನಾಗಿ ಬುದ್ಧ, ಬಸವ, ಅಂಬೇಡ್ಕರ್​ ಹೆಸರಲ್ಲಿ ಪ್ರಮಾಣ.. ಇವತ್ತು ಅವರನ್ನ ನೋಡಿದ ರಾಜ್ಯದ ಅದೆಷ್ಟೋ ಜನರು ಯಾರಿದು ಅಂತ ಒಂದು ಕ್ಷಣ ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ರು. ಇಷ್ಟೂ ದಿನ ಕೇಳದ ಹೆಸರು ಒಮ್ಮೆಲೆ ಮಿನಿಸ್ಟರ್​ ಆದ್ಮೇಲೆ ಗೊತ್ತಾಗಿದ್ದು ಅಂತ ಒಳಗೊಳಗೇ ಅಂದುಕೊಂಡಿದ್ರು.. ಅಂದಹಾಗೇ ಇವತ್ತು ರಾಜಭವನದಲ್ಲಿ ಕಾನ್ಶಿರಾಮ್​ ಗರಡಿಯ ಆನೆಯೊಂದು ಆತ್ಮವಿಶ್ವಾಸದಿಂದ ಘೀಳಿಟ್ಟಿದೆ.. ಹಾಗೇ, ಆತ್ಮವಿಶ್ವಾಸದಿಂದ ಘೀಳಿಟ್ಟ ಆನೆ ಇನ್ಯಾರೋ ಅಲ್ಲ.. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸಿದ ಶಾಸಕ ಎನ್​. ಮಹೇಶ್​..

ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎನ್​. ಮಹೇಶ್​ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ ಸಚಿವರಾಗಿದ್ದಾರೆ. ಸಚಿವರಾಗೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.. ಯಾಕಂದ್ರೆ, ಉತ್ತರ ಪ್ರದೇಶ ಹೊರತುಪಡಿಸಿ ಬೇರೊಂದು ರಾಜ್ಯದಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕನಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ಸಿಕ್ಕಿರೋದು ಇದೇ ಮೊದಲು. ರಾಜ್ಯದ ಜನರಿಗೆ ಮಹೇಶ್​ ಹೆಸರು ಹೊಸದು ಎನ್ನಿಸಿದ್ರೂ ಕೊಳ್ಳೇಗಾಲ ಯುವಪಡೆಗೆ ಮಹೇಶ್​ ಅಂದ್ರೆ ಶಕ್ತಿ.. ಅವರು ನಡೆದು ಬಂದ ರಾಜಕೀಯ ಹಾದಿ ಅತ್ಯಂತ ರೋಚಕ.

ಕೆಎಎಸ್​ ಅಧಿಕಾರಿಯಾಗಿದ್ದ ಎನ್​.ಮಹೇಶ್
ಇದು ಎಲ್ಲರ ಊಹೆಗೂ ಮೀರಿದ್ದು.. ಜೂನ್​ 1ರ 1956ರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಂಕನಪುರ ಗ್ರಾಮದಲ್ಲಿ ದಲಿತ ಕುಟುಂಬದ ನಾಲ್ಕನೇ ಕುಡಿಯಾಗಿ ಎನ್​.ಮಹೇಶ್ ಜನಿಸಿದ್ರು. ಮುಂದಿನ ದಿನಗಳಲ್ಲಿ ಬೆಂಗಳೂರು ವಿವಿಯಲ್ಲಿ ಎಂ.ಎ ಇನ್​ ಎಕಾನಾಮಿಕ್ಸ್​ ಪದವಿ ಪಡೆದು, ಕಠಿಣ ಪರಿಶ್ರಮದ ಮೂಲಕ ಕೆಎಎಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಬರೋಬ್ಬರಿ 15 ವರ್ಷಗಳ ಕಾಲ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ರು. ಆದ್ರೆ, ಮುಂದಿನ ದಿನಗಳಲ್ಲಿ ದೀನ- ದಲಿತರ ಹರಿಕಾರ, ಹಿಂದುಳಿದ ಜನರ ಬಲವಾಗಿದ್ದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್​ರವರಿಂದ ಪ್ರೇರಣೆಗೊಂಡು ಸರ್ಕಾರಿ ಕೆಲಸಕ್ಕೆ ಗುಡ್​ಬೈ ಹೇಳಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟರು. 1998ರಲ್ಲಿ ರಾಜಕೀಯ ಪ್ರವೇಶ ಮಾಡಿ ಮಂಡ್ಯ ಲೋಕಸಭೆ, ಕಿರುಗಾವಲು ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಅದಾದ ಬಳಿಕ 2004, 2008, 2013ರ ವಿಧಾನಸಭೆ ಚುನಾವಣೆಗಳಲ್ಲೂ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ರು.. ಆದ್ರೆ, ಬರೋಬ್ಬರಿ 20 ವರ್ಷಗಳ ತಪಸ್ಸು, ಇಟ್ಟ ಹೆಜ್ಜೆ ಹಿಂದೆ ತೆಗೆಯದ ಮನೋಬಲ ಕೊನೆಗೂ ಮಹೇಶ್​ರವರಿಗೆ ಫಲ ಕೊಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಅದೇ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವ್ಯಕ್ತಿಯಾಗಿ ತುಂಬಾ ಸಿಂಪಲ್​.. ಯುವಕರ ಪಾಲಿನ ಅಣ್ಣಾ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎನ್​.ಮಹೇಶ್​ ಕೊಳ್ಳೇಗಾಲ ಭಾಗದ ಯುವಕರ ಪಾಲಿಗೆ ಪ್ರೀತಿಯ ಅಣ್ಣಾ ಮಹೇಶ್​ ಎಂದೇ ಚಿರಪರಿಚಿತ.. ಕೆಎಎಸ್​ ಅಧಿಕಾರಿಯಾಗಿ ದುಡಿದಿದ್ದರೂ ಮಹೇಶ್ ಇಂದಿಗೂ​ ಕೊಳ್ಳೇಗಾಲದ ಆದರ್ಶನಗರದಲ್ಲಿ ಬಾಡಿಗೆ ಮನೆಯಲ್ಲೇ ವಾಸವಿದ್ದಾರೆ. ಎಲ್ಲೆಂದರಲ್ಲಿ ಊಟ ಮಾಡೋದು.. ಜಾಗ ಸಿಕ್ಕ ಕಡೆ ನೆಲದ ಮೇಲೆಯೇ ಮಲಗುವುದು ಮಹೇಶ್​ಗೆ ಹೊಸದಲ್ಲ.. ದಾರಿಯಲ್ಲಿ ಹಾದು ಹೋಗೋ ಯುವಕರ ಸೈಕಲ್​, ಬೈಕ್​ಗಳಲ್ಲಿ ಮಹೇಶ್​ ಡ್ರಾಪ್​ ತೆಗೆದುಕೊಂಡಿರೋ ಎಷ್ಟೋ ಉದಾಹರಣೆಗಳಿವೆ ಅಂತಾರೆ ಅವರ ಆಪ್ತರು. ಈ ಮೂಲಕ ವೈಭವೋಪೇತ ಜೀವನ ನಡೆಸೋ ರಾಜಕಾರಣಿಗಳ ಮಧ್ಯೆ ಮಹೇಶ್​ ಲೈಫ್​ಸ್ಟೈಲ್​ ತುಂಬಾನೇ ಸಿಂಪಲ್ ಅಂದ್ರೆ ತಪ್ಪಾಗಲ್ಲ. ಯುವಕರ ಪಾಲಿನ ಶಕ್ತಿ ಅಂತ ಹೇಳಿದ್ದಕ್ಕೆ ತಕ್ಕಂತೆ ಮಹೇಶ್​ ಇಂದು ರಾಜ್ಯಾದ್ಯಂತ ಬಹುಜನ ವಿದ್ಯಾರ್ಥಿ ಸಂಘದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಒಟ್ಟಾರೆ, ಬಡವರ ಪಾಲಿಗೆ ನೆರವಾಗಬೇಕು ಅಂತ ಕನಸು ಕಂಡಿದ್ದ ಮಹೇಶ್​ಗೆ ಕೊನೆಗೂ ಸಚಿವ ಸ್ಥಾನ ಒಲಿದು ಬಂದಿದೆ. ಅಣ್ಣಾ ಮಹೇಶ್​ರವರನ್ನ ವಿಧಾನಸಭೆಗೆ ಕಳುಹಿಸಿಕೊಡ್ಲೇಬೇಕು ಅಂತ ಪಣತೊಟ್ಟಿದ್ದ ಕೊಳ್ಳೇಗಾಲ ಭಾಗದ ಯುವಕರ ಆಸೆ ಈಡೇರಿದೆ.

ವಿಶೇಷ ಬರಹ : ಸುಧಾಕರ್​.ಬಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv