ಅಂಬಿ ಬರ್ತ್​ಡೇಗೆ ಅಪ್ಪನೆದುರೆ ತೊಡೆ ತಟ್ತಾರೆ ಅಭಿಷೇಕ್​..!

ರೆಬೆಲ್​ ಸ್ಟಾರ್​ ಅಂಬರೀಶ್​ ಇಲ್ಲದ ಮೊದಲ ಬರ್ತ್​ಡೇಯಂದು, ಅವ್ರ ಪುತ್ರ ಯಂಗ್ ರೆಬೆಲ್ ಸ್ಟಾರ್​ ಅಭಿಷೇಕ್ ಅಂಬರೀಶ್​ ಅಭಿನಯದ ಚೊಚ್ಚಲ ಸಿನಿಮಾ ಅಮರ್​ ತೆರೆಕಾಣ್ತಾ ಇದೆ. ಅಂಬರೀಶ್​ ಅಭಿಮಾನಿಗಳಿಗೆ ಅಂಬಿ ಬರ್ತ್​ಡೇಗೆ ಇದೇ ಉಡುಗೊರೆ ಅಂತ ಹೇಳಲಾಅಗಿತ್ತು. ನಾಗಶೇಖರ್​ ಆ್ಯಕ್ಷನ್​ ಕಟ್​ ಹೇಳಿ, ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿರೋ ಸಿನಿಮಾದ ಬಗ್ಗೆ ಈಗಾಗ್ಲೆ ನಿರೀಕ್ಷೆಗಳು ತುಂಬಾ ಇವೆ. ಸದ್ಯ ಅಭಿ ಸಿನಿಮಾದ ಪ್ರಮೋಷನ್​ನ ಬಗ್ಗೆ ಪ್ಲಾನಿಂಗ್​ನಲ್ಲಿದ್ದಾರೆ. ಈಗ ಅನೌನ್ಸ್​ ಆಗಿರೋ ಹಾಗೆ ಅಮರ್​ ಸಿನಿಮಾ ಮೇ​ 31ಕ್ಕೆ ತೆರೆಗೆ ಬರಲಿದೆ. ಇದಕ್ಕೆ ಪೂರ್ವ ಭಾವಿಯಾಗಿ ಈಗಾಗ್ಲೆ ಸಿನಿಮಾದ ಹಾಡುಗಳು ರಿಲೀಸ್​ ಆಗ್ತಾ ಇವೆ. ಆದ್ರೆ ಅಭಿ ಬರೋದಕ್ಕೂ ಒಂದು ದಿನ ಮೊದಲೇ ಅವ್ರ ತಂದೆ ಅಂಬರೀಶ್​ ಥಿಯೇಟರ್​ಗೆ ಎಂಟ್ರಿ ಕೊಡಲಿದ್ದಾರೆ.
ಮೇ-30ಕ್ಕೆ ಅಂಬಿಯ ಅಂತ ಸಿನಿಮಾ ರಿ-ರಿಲೀಸ್​
1981ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ, 38 ವರ್ಷಗಳ ನಂತ್ರ ಮತ್ತೆ ಬಿಡುಗಡೆಯಾಗಗ್ತಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದ ಸಿನಿಮಾದಲ್ಲಿ ರೆಬೆಲ್ ಸ್ಟಾರ್​ ದ್ವಿಪಾತ್ರದಲ್ಲಿ ನಟಿಸಿದ್ರು. ಸಿನಿಮಾದಲ್ಲಿನ ಕನ್ವರ್​ಲಾಲ್​ ಪಾತ್ರ ಇವತ್ತಿಗೂ ಫೇಮಸ್​. ಜಿ.ಕೆ. ವೆಂಕಟೇಶ್ ಮ್ಯೂಸಿಕ್​ ಕಂಪೋಸ್​ ಮಾಡಿದ್ದ ಈ ಸಿನಿಮಾವನ್ನ ಪರಿಮಳ ಆರ್ಟ್ ಮೂಲಕ ಹೆಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ನಿರ್ಮಿಸಿದ್ದರು. ಈ ಚಿತ್ರ ಈಗ ಡಿಜಿಟಲ್ ಫಾರ್ಮಾಟ್‍ನಲ್ಲಿ ರಿಲೀಸ್​ ಆಗಲು ರೆಡಿಯಾಗ್ತಾ ಇದೆ. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಹೊಸ ರೂಪದ ಅಂತ`ಚಿತ್ರವನ್ನ, ರಾಜ್ಯಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತೆ ಅಂತ ನಿರ್ಮಾಪಕ ವೇಣುಗೋಪಾಲ್ ತಿಳಿಸಿದ್ದಾರೆ.