ಸೊರಗಿದ್ದ ಅಬ್ಬಿಗೆ ಜೀವತುಂಬಿದ ವರುಣ..!

ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಅಬ್ಬರಿಸುತ್ತಿರುವ ಮಳೆರಾಯ ಸೃಷ್ಟಿಸಿರುವ ಅನಾಹುತ ಅಷ್ಟಿಷ್ಟಲ್ಲ‌. ಗಾಳಿ ಮಳೆಯಿಂದಾಗಿ ಜಿಲ್ಲೆಯ ಜನ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ರೆ ಮಡಿಕೇರಿಯಿಂ ಸ್ವಲ್ಪ ದೂರದಲ್ಲಿರುವ ಆ ಚೆಲುವೆ ಮಾತ್ರ ಭಾರಿ ಮಳೆಯಿಂದ ಸಖತ್ ಖುಷಿಯಾಗಿದ್ದಾಳೆ. ಮಾತ್ರವಲ್ಲ ಮಳೆಯ ನಡುವೆ ತನ್ನ ಚೆಲುವಿನ ವೈಯ್ಯಾರದ ದರ್ಶನ ನೀಡುತ್ತಿದ್ದಾರೆ.

ಆಕೆ ಮಯ್ಯಾರು ಅಲ್ಲ, ತನ್ನ ಸೌಂದರ್ಯದ ಮೂಲಕವೇ ಸೌಂದರ್ಯಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುವ ಅಬ್ಬಿ… ಅರ್ಥಾತ್ ಅಬ್ಬಿ ಜಲಪಾತ.! ಮಡಿಕೇರಿಯಿಂದ 7 ಕಿಲೋಮೀಟರ್​ ದೂರದ ಪ್ರಶಾಂತ ಪರಿಸರದಲ್ಲಿ ನೆಲೆಸಿರುವ ಅಬ್ಬಿಗೆ ಮಳೆ ಬಂತೆಂದರೆ ಎಲ್ಲಿಲ್ಲದ ಖುಷಿ, ಉಲ್ಲಾಸ… ಯಾಕಂದ್ರೆ ಬೇಸಿಗೆಯಲ್ಲಿ ಬಸವಳಿದು ನಿತ್ರಾಣಗೊಂಡ ಜೀವಕ್ಕೆ ಮರುಜೀವ ಬಂದಂತಾಗುತ್ತದೆ. ಇದೀಗ ಅಬ್ಬಿ ಜಲಪಾತ ಕೂಡಾ ಅಂಥ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಬೇಸಿಗೆಯಲ್ಲಿ ನೀರಿಲ್ಲದೆ ಸೊರಗಿ, ಬಂಡೆಕಲ್ಲಿನ ದರ್ಶನವಾಗುತ್ತಿದ್ದ ಜಾಗದಲ್ಲಿ ಧುಮ್ಮಿಕ್ಕುವ ಜಲಧಾರೆಯ ದರ್ಶನವಾಗುತ್ತಿದೆ. ಸುಮಾರು 8೦ ಅಡಿಗೂ ಎತ್ತರದ ಪ್ರದೇಶದಿಂದ ಬಳುಕುತ್ತಾ ಬಂದು ಬಂಡೆ ಮೇಲಿಂದ ಧುಮ್ಮಿಕ್ಕುವ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳುವ ಕ್ಷಣವನ್ನು ಪದಗಳಲ್ಲಿ ವರ್ಣಿಸೋದಕ್ಕಿಂತ ಖುದ್ದು ನೋಡಿ ಅನುಭವಿಸಬೇಕು ಅನ್ನೋದು ಅಬ್ಬಿಯನ್ನು ಕಂಡವರ ಮಾತು. ಫಾಲ್ಸ್‌ಗೆ ಹೊಸಕಳೆ ಬಂದಿರೋದ್ರಿಂದ ಪ್ರವಾಸಿಗತ ಸಂಖ್ಯೆ ಕೂಡಾ ಹೆಚ್ಚಾಗಿದೆ. ಕಾಫಿತೋಟಗಳ ಮಧ್ಯೆ ಕಾಲುದಾರಿಯಲ್ಲಿ ಸಾಗಿ ಅಬ್ಬಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಪಾಯಕಾರಿ ಜಲಪಾತ ಆಗಿರೋದ್ರಿಂದ ಅಬ್ಬಿಯ ತಳಭಾಗಕ್ಕೆ ಇಳಿಯೋದನ್ನು ನಿಷೇಧಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv