ಗಟರಲ್ಲೇ ಸ್ಲೀಪಿಂಗ್, ತಿಪ್ಪೆ ಮೇಲೆಯೇ ವಾಕಿಂಗ್-ಪಾಕ್​ನ ಈ ಪೊಲಿಟಿಶಿಯನ್​ ಡಿಫರೆಂಟ್ ಪ್ರಚಾರ..!

ಉದರನಿಮಿತ್ತಂ ಬಹುಕೃತ ವೇಶಂ ಎಂಬುದು ಹಳೆಯ ಮಾತಾಯಿತು. ಇದೇ ಮಾತನ್ನ ರಾಜಕಾರಣಿಗಳಿಗೆ ಹೋಲಿಸಿ ನೋಡುವುದಾದರೆ ರಾಜಕೀಯ ನೇತಾರರು ವೋಟಿಗಾಗಿ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಾರೆ ಎಂಬ ಮಾತೂ ಇದೆ. ಆದರೆ ಈಗ ನಾವು ಹೇಳಹೊರಟಿರುವುದು ಸ್ವಲ್ಪ ವಿಭಿನ್ನವಾದ ಸ್ಟೋರಿ..

ನೀವು ಈ ಸ್ಟೋರಿ ಕೇಳಬೇಕೆಂದರೆ/ನೋಡಬೇಕೆಂದರೆ ಸೀದಾ ಪಾಕಿಸ್ತಾನಕ್ಕೆ ಹೋಗಬೇಕು. ಆದರೆ ನಾವೇ ಇಲ್ಲಿ ನಿಮಗಾಗಿ ಹೇಳುತ್ತೇವೆ.. ಕೇಳಿ-ನೋಡಿ! ಜುಲೈ 25ಕ್ಕೆ ಅಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ರಾಷ್ಟ್ರೀಯ ಅಸೆಂಬ್ಲಿಗೆ ನಡೆಯುವ ಈ ಚುನಾವಣೆ ಈಗಾಗಲೇ ರಂಗೇರಿದೆ. ಜಿದ್ದಾಜಿದ್ದಿ ಜೋರಾಗಿದೆ. ಜತೆಗೆ ಕಣದಲ್ಲಿರುವ ಅಭ್ಯರ್ಥಿಗಳೂ ವಿಭಿನ್ನ ಹಾದಿಯಲ್ಲಿ ಹೆಜ್ಜೆಹಾಕುತ್ತಾ ಮತದಾರರನ್ನ ಸೆಳೆಯುತ್ತಿದ್ದಾರೆ.

ಪಾಕಿಸ್ತಾನದ ಖ್ಯಾತ ಬಂದರು ನಗರ ಕರಾಚಿಯಲ್ಲಿಯೂ ಚುನಾವಣಾ ಹವಾ ಜೋರಾಗಿಯೇ ಬೀಸುತ್ತಿದೆ. ಇಲ್ಲೊಬ್ಬ ಆಮ್​ ಆದ್ಮಿ ಇದಾರೆ. ಆತನೂ ಕಣದಲ್ಲಿದ್ದು, ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಯಾರಪ್ಪಾ, ಈ ಆಮ್​ ಆದ್ಮಿ? ಅಪ್ಪಿತಪ್ಪಿ ದೆಹಲಿಯಿಂದ ಅವರೇನಾದರೂ ರಫ್ತು ಆಗಿದ್ದಾರಾ? ಎಂದು ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಎಕೆಂದರೆ ಅಲ್ಲಿ ಕರಾಚಿಯಲ್ಲಿಯೂ ಆಮ್​ ಆದ್ಮಿ ಪಕ್ಷವಿದ್ದು, ಅದು ‘ಆಮ್​ ಆದ್ಮಿ ಪಾಕಿಸ್ತಾನ’ ಅಂತಿದೆ.

ಈ ಪಕ್ಷದ ವತಿಯಿಂದ ಅಯಾಜ್​ ಮೆಮೋಮ್​ ಮೋಟಿವಾಲಾ ಎಂಬ ವ್ಯಕ್ತಿ ಅಸೆಂಬ್ಲಿ ಎಲೆಕ್ಷನ್​ಗೆ ಸ್ಪರ್ಧಿಸಿದ್ದಾರೆ. ಈ ಸ್ಪರ್ಧಿಯ ಪ್ರಚಾರ ಕಾರ್ಯ ತೀರಾ ವಿಭಿನ್ನವಾಗಿದೆ. ಅವರು ತುಳಿದಿರುವ ಹಾದಿಯನ್ನ ನೀವು ವಿಡಿಯೋದಲ್ಲಿ ನೋಡಿದರೂ ಸಾಕು ಮೂಗುಮುಚ್ಕೊಳ್ಳೋ ಪ್ರಮೇಯ ಬರಬಹುದು. ಏಕೆಂದರೆ ಇವರು ಮತದಾರರ ಮನ ಗೆಲ್ಲಲು ಏನೆಲ್ಲಾ ಪಾಡು ಪಡುತ್ತಿದ್ದಾರೆ ಅಂದರೆ ಸೀದಾ ಗಾರ್ಬೇಜ್​ ರಾಶಿಗಳ ಕಡೆಗೆ ತಮ್ಮ ಗಮನ ನೆಟ್ಟಿದ್ದಾರೆ.

ಎಲ್ಲೇ ಗಾರ್ಬೇಜ್​, ಗಟಾರ್​, ಮ್ಯಾನ್​ ಹೋಲ್​ ಕಂಡುಬರಲಿ ಅಲ್ಲೆಲ್ಲಾ ಇವರು ತಮ್ಮ ತಮ್ಮ ಜಂಡಾ ಹೂಡುತ್ತಿದ್ದಾರೆ. ಆಮ್​ ಆದ್ಮಿ ಪಾಕಿಸ್ತಾನ್ ಪಕ್ಷದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಈ ಅಭ್ಯರ್ಥಿ ‘ಸ್ವಚ್ಛ್​ ಕರಾಚಿ’ ಅಭಿಯಾನ ಹಮ್ಮಿಕೊಂಡವರಂತೆ ನಗರದಲ್ಲಿ ಎಲ್ಲೇ ಕಸ-ಗಿಸ ಕಾಣಲಿ ಸೀದಾ ಅಲ್ಲಿಗೆ ಹೋಗಿ ಪಟ್ಟಾಂಗ ಕುಳಿತುಬಿಡುತ್ತಾರೆ. ಅಲ್ಲಿನ ಜ್ವಲಂತ ಸಮಸ್ಯೆಯನ್ನ ಕಂಡು ಮಮ್ಮಲಮರುಗಿ ಅಲ್ಲೇ ಪವಡಿಸುವುದೂ ಉಂಟು. ಅಥವಾ ಅಲ್ಲೇ ಖುರ್ಚಿ ಹಾಕ್ಕೊಂಡ್ ಗಡದ್ದಾಗಿ ಬ್ರೇಕ್​ ಫಾಸ್ಟ್​ ಸಹ ಮಾಡಿಬಿಡ್ತಾರೆ!

ಅಷ್ಟೇ ಅಲ್ಲ ‘ಸ್ವಚ್ಛ್​ ಕರಾಚಿ’ಗೆ ತಾವೆಷ್ಟು ಕಟಿಬದ್ಧರಾಗಿದ್ದೇವೆ ಎಂಬುದನ್ನ ಜನರಿಗೆ ಸಾಕ್ಷಿ ಸಮೇತ ತೋರಿಸಲು ಆತ ತಮ್ಮ ಅಷ್ಟೂ ಕಾರ್ಯಾಚರಣೆಯನ್ನು ಫೋಟೋ ತೆಗೆದು/ ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ!

ಜಾಲತಾಣಿಗರು ಅಯಾಜ್ ಮೆಮೋಮ್​ ಮೋಟಿವಾಲಾರ ಈ ಪ್ರಚಾರ ಕಾರ್ಯಕ್ಕೆ ಮಾರುಹೋಗಿದ್ದಾರೆ. ಕೆಲವರು ಇದೆಲ್ಲಾ ವೋಟಿಗಾಗಿ ಬಹುಕೃತ ವೇಶಂ ಅಷ್ಟೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಡ್ರಾಮಾ ನಿಲ್ಲಿಸು ಸಾಕು ಎಂದು ಕಮೆಂಟ್​ ಮಾಡಿ, ಅಯಾಜ್​ಗೆ ನೀರಿಳಿಸಿದ್ದಾರೆ. ಆದರೆ ಬಹಳಷ್ಟು ಮಂದಿ ಅಯಾಜ್​ಗೆ ಜಯ್!​ ಎಂದಿದ್ದಾರೆ. ಕರಾಚಿಯ ದಭಾಂಗ್! ಎಂದೂ ಬಣ್ಣಿಸಿದ್ದಾರೆ.

ಅಲ್ಲಾ, ಅಯಾಜ್ ಮೋಟಿವಾಲಾರ ಈ ‘ವೋಟಿಗಾಗಿ ಬಹುಕೃತ ವೇಶಂ’ ನಮಗೇನೂ ಹೊಸದಲ್ಲ ಅಲ್ಲವೇ. ರಸ್ತೆಗಳಲ್ಲಿ ಉರುಳಾಡುವವರು, ಕತ್ತೆಗಳ ಮೇಲೆ ಮೆರವಣಿಗೆ ಹೊರಡುವವರು, ಕೈಯಲ್ಲಿ ಪೊರಕೆ ಹಿಡಿಯುವವರೂ ನಮ್ಮ ಮಧ್ಯೆಯೇ ಇದ್ದಾರಲ್ಲ!? ಹಾಗಾಗಿ ಅಯಾಜ್ ಮೋಟಿವಾಲಾ ನಮಗೇನೂ ಭಿನ್ನವಾಗಿ ಕಾಣುವುದಿಲ್ಲ. ಈತ ಇವರೆಲ್ಲರ ಬಾಪ್​ ಥರಾ ಕಾಣಿಸ್ತಾರೆ! ಆದರೂ.. ವೊಟಿಗಾಗಿ ಏನೆಲ್ಲಾ ಮಾಡ್ತಾರಲ್ಲಾ ಅಂತ ಒಮ್ಮೆ ಬೆಚ್ಚಿಬೀಳುವುದು/ ಆಶ್ಚರ್ಯಗೊಳ್ಳುವುದು / ಮೂಗುಮುರಿಯುವುದು ಗ್ಯಾರಂಟಿ, ಏನಂತೀರಿ!?

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv