ಆಧಾರ್‌ನಿಂದ 90 ಸಾವಿರ ಕೋಟಿ ಉಳಿತಾಯ; ಜೆ.ಸತ್ಯನಾರಾಯಣ

ಹೈದಾರಾಬಾದ್‌: ಆಧಾರ್‌ ಮೂಲಕ ನೇರವಾಗಿ ಫಲಾನುಭವಿ ಖಾತೆಗೆ ಹಣ ವರ್ಗಾವಣೆ(ಡಿಬಿಟಿ) ಮಾಡಿದ ಪರಿಣಾಮವಾಗಿ 2018 ಮಾರ್ಚ್‌ 31 ರ ವೇಳೆಗೆ 90 ಸಾವಿರ ಕೋಟಿ ಉಳಿತಾಯವಾಗಿದೆ ಅಂತ ಆಧಾರ್‌ ಪ್ರಾಧಿಕಾರದ ಅಧ್ಯಕ್ಷ ಜೆ.ಸತ್ಯನಾರಾಯಣ ತಿಳಿಸಿದ್ದಾರೆ. ಇಂಡಿಯಾ ಸ್ಕೂಲ್‌ ಆಫ್‌ ಬ್ಯುಸಿನೆಸ್‌(ಐಎಸ್‌ಬಿ) ಹೈದಾರಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧಾರ್‌ ಜೋಡಣೆಯಿಂದ ಬೋಗಸ್‌ ಮತ್ತು ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಲಾಗಿದೆ. ಈಗಾಗ್ಲೇ 121 ಕೋಟಿ ಜನರು ಆಧಾರ್‌ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 3 ಕೋಟಿ ಜನರು ಇ-ವ್ಯವಹಾರ ಮಾಡುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದ ಆಧಾರ್‌  ಕಾನೂನಿನಡಿಯಲ್ಲಿ ಇನ್ನಷ್ಟು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಆಧಾರ್‌ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಬೆಂಗಳೂರು ಮತ್ತು ಮನೇಸರ್‌ನಲ್ಲಿ ಸುಮಾರು 7 ಸಾವಿರ ಸರ್ವರ್‌ಗಳಲ್ಲಿ ಮಾಹಿತಿಯನ್ನು ಸಂರಕ್ಷಿಸಿಡಲಾಗಿದೆ ಅಂತ ಹೇಳಿದ್ದಾರೆ.