ಹೀರೋ ಆಗಬೇಕಿದ್ದವ ತಾಯಿಯಿಂದಲೇ ಹತ್ಯೆಯಾದ

ದೊಡ್ಡಬಳ್ಳಾಪುರ: ಇದು ನಿಜಕ್ಕೂ ದುರಂತ ಕಣ್ರೀ. ವಿಧಿಯಾಟಕ್ಕೆ ತಂದೆ ಚಂದನ್ ಬಲಿಯಾದ ಬೆನ್ನಲ್ಲೇ, 13 ವರ್ಷದ ಮಗ ತಾಯಿಯಿಂದಲೇ ಹತ್ಯೆಗೀಡಾಗಿಹೋಗಿದ್ದಾನೆ. ಅದೂ ಅಂತಿಂಥ ಮಗ ಅಲ್ಲ. ಮುಂದೆ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಬೇಕಿದ್ದ ಪ್ರತಿಭಾನ್ವಿತ ಬಾಲಕ. ತಂದೆ ಚಂದನ್​ಗೆ ಬದುಕಿನಲ್ಲಿ ಇದ್ದದ್ದು ಒಂದೇ ಗುರಿ. ಅದು ತನ್ನ ಮಗನನ್ನು ಸ್ಟಾರ್ ಆಗಿಸಬೇಕು ಅಂತ. ಅದಕ್ಕೆಂದೇ ತನ್ನ ಮಗ ತುಷಾರ್ ಕೇವಲ ಮೂರು ವರ್ಷದವನಾಗಿದ್ದಾಗಿನಿಂದಲೇ ಯೋಗಾಭ್ಯಾಸವನ್ನ ಮಾಡಿಸಲು ಶುರು ಮಾಡಿದ್ದರು ಚಂದನ್.
ಸದ್ಯಕ್ಕೆ ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ತುಷಾರ್​ಗೆ ಚಿಕ್ಕವನಿದ್ದಾಗಿನಿಂದಲೇ ಸೃಷ್ಟಿ ಯೋಗ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡಿಸಲಾಗಿತ್ತು. ಅಷ್ಟೇ ಅಲ್ಲ, ಆ ಪ್ರತಿಭಾವಂತ ಮಗು ಕಳೆದ ಮೂರು ವರ್ಷದಿಂದ ಕರಾಟೆಯಲ್ಲಿ ತರಬೇತಿ ಪಡೀತಾ ಇದ್ದ. ದೊಡ್ಡಬಳ್ಳಾಪುರದ ಎಂ.ಎಸ್.ವಿ ಸಂಸ್ಥೆಯಲ್ಲಿ ಮೈಚಳಿ ಬಿಟ್ಟು ಕರಾಟೆ ಕಲಿಯುತ್ತಿದ್ದ ತುಷಾರ್, ಕೇವಲ 3 ವರ್ಷಗಳ ತರಬೇತಿ ಅವಧಿಯಲ್ಲಿಯೇ ಬ್ಲ್ಯಾಕ್ ಬೆಲ್ಟ್ ಕೂಡ ಪಡೆದಿದ್ದ. ಅಪ್ಪನಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ಕನಸು ತುಷಾರ್​ಗೂ ಇತ್ತು ಎನ್ನಲಾಗಿದ್ದು, ತನ್ನ ತಂದೆ ಬಳಿ ಸ್ಪಷ್ಟ ಕನ್ನಡ ಅಭ್ಯಾಸವನ್ನು ಕೂಡ ಆತ ಮಾಡುತ್ತಿದ್ದ. ಆದ್ರೆ, ಬರಸಿಡಿಲಿನಂತೆ ಬಂದೆರಗಿದ ಚಂದನ್ ಸಾವು, ಇಂದು ತಾಯಿಯಿಂದಲೇ ಈ ಬಾಲಕನ ಹತ್ಯೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಆ ತಾಯಿ ಕೂಡ ಆ್ಯಸಿಡ್ ಕುಡಿದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತೆ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv