ಕಥೆ ಹೇಳುವೆ…ನನ್ನ ಕಣ್ಣೀರ ಕಥೆ ಹೇಳುವೇ…..!

ಹಂತಕರು ನನ್ನ ಬೆನ್ನು ಬಿದ್ದಿದ್ದಾರೆ. ನಾನು ನನ್ನ ಸಾವಿನ ದಿನಗಳನ್ನ ಎಣಿಸುತ್ತಿದ್ದೇನೆ. ಇಂದು ಸಾಯಬಹುದು. ನಾಳೆ ಸಾಯಬಹುದು ಅಂತಾ ದಿನ ಎಣಿಸುತ್ತಿದ್ದೇನೆ. ನನ್ನ ಕಣ್ಣೀರು ಒರೆಸಲು ನನ್ನ ಕುಟುಂಬವೇ ಇಲ್ಲದಂತಾಗಿದೆ. ಯಾಕಂದ್ರೆ, ಅವರ ಸಾವನ್ನು ನನ್ನ ಕಣ್ಣಾರೆ ನೋಡಿದ್ದೇನೆ. ದುಃಖದ ವಿಚಾರ ಅಂದ್ರೆ, ನಮ್ಮನ್ನ ಕೊಲ್ಲುತ್ತಿರೋರು ನಮ್ಮ ಮಕ್ಕಳೇ. ನನ್ನ ನೆರಳಿನಲ್ಲಿ ಮಲಗಿ, ನಾವು ಹೊರ ಸೂಸುವ ತಂಗಾಳಿಯಲ್ಲಿ ತೇಲಾಡಿದವರು.! ಪಾಪ… ನನ್ನ ಸಾವಿನಲ್ಲಿ ಅವರ ಸಾವೂ ಅಡಗಿದೆ ಅನ್ನೋ ಸತ್ಯ ಗೊತ್ತಿಲ್ಲದ ಮೂಢರು ಅವರು. ನಾನ್ಯಾಕೆ ಇಷ್ಟೊಂದು ಕೋಪಗೊಂಡಿದ್ದೇನೆ. ಅಷ್ಟಕ್ಕೂ ನಾನ್ಯಾರು ಅನ್ನೋ ಪ್ರಶ್ನೆಯೇ… ನನ್ನ ಕಥೆ ಕೇಳಿದ್ರೆ ನಿಮಗೆ ಅರ್ಥವಾಗುತ್ತದೆ.. ಕೇಳಿ…

ನಾನು ಆಲದ ಮರ. 100ಕ್ಕೂ ಹೆಚ್ಚು ವರ್ಷಗಳಿಂದ ಬದುಕಿದ್ದೇನೆ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ಬೀಡು ಎಂದೆಲ್ಲಾ ಕರೆಯೋ ಧಾರವಾಡ ನನ್ನ ಊರು. ಧಾರವಾಡ-ಬೆಳಗಾವಿ ರಸ್ತೆಯೇ ನನ್ನ ಮನೆ. ನಾನಷ್ಟೇ ಅಲ್ಲ, ಮಾವು, ನೇರಳೆ, ಬೇವು, ಅಕೇಶಿಯಾ, ನೀಲಗಿರಿ, ಅತ್ತಿ, ಹುಣಸೆ ಸೇರಿದಂತೆ ನನ್ನ ಕುಟುಂಬ ಸದಸ್ಯರು ಇಲ್ಲೇ ಇದ್ದಾರೆ. ನಾವು ಇದ್ದೀವಿ… ಉಸಿರಾಡುತ್ತಿದ್ದೇವೆ. ಆದ್ರೆ, ನೆಮ್ಮದಿಯಿಂದಿಲ್ಲ. ಯಾಕಂದ್ರೆ, ನಮ್ಮ ಆಯಸ್ಸು ಕೊನೆಗೊಳಿಸಲು ಕೊಡಲಿಗಳು ಕಾಯುತ್ತಿವೆ. ಅಭಿವೃದ್ಧಿಯ ಅಫೀಮಿನಲ್ಲಿ ಮೈ ಮರೆಯುತ್ತಿರೋ ನನ್ನ ಮಕ್ಕಳೇ ನನ್ನ ಹೃದಯ ಛಿದ್ರ ಮಾಡಲು ಹೊಂಚು ಹಾಕುತ್ತಿದ್ದಾರೆ. ನನ್ನನ್ನು ಕೊಲ್ಲುತ್ತಿರೋರು ನನ್ನ ಮಕ್ಕಳೇ. ಆದ್ರೆ, ಅವರಿಗೆ ಹೃದಯವಿಲ್ಲ. ನಮಗಿದೆ. ಇಷ್ಟೇ ವ್ಯತ್ಯಾಸ.

ನೂರಾರು ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ ಹಣ್ಣು, ನೆರಳು ಒದಗಿಸಿ ವಾತಾವರಣಕ್ಕೆ ಆಮ್ಲಜನಕ ಪೂರೈಸಿ, ಮಣ್ಣು ಸವಕಳಿ ತಡೆಗಟ್ಟಿ, ಪ್ರಕೃತಿ ಸಮತೋಲನ ಕಾಪಾಡಿಕೊಂಡು ಬಂದಿದ್ದೇವೆ. ಇದು ಮನುಷ್ಯರಿಗೆ ಗೊತ್ತಿಲ್ಲ ಅಂತಲ್ಲ. ಗೊತ್ತಿದ್ರೂ ಅಸಡ್ಡೆ. ಪಕ್ಕದ ಹುಬ್ಬಳ್ಳಿಗೆ ಹೋಗಿ ಬಿರು ಬಿಸಿಲಿನಿಂದ ಮೈ ಚರ್ಮ ಸುಟ್ಟಿಸಿಕೊಂಡು ಬಂದಾಗ ನಾನು ಅವರನ್ನ ಸಂತೈಸಿದ್ದೇನೆ. ನೆರಳು ನೀಡಿದ್ದೇನೆ. ಗಾಳಿಯೂ ನೀಡಿದ್ದೇನೆ. ಆದರೂ ಇದು ಅವರಿಗೆ ನೆನೆಪೇ ಇಲ್ಲ. ನಾವು ಇಲ್ಲಿ ಇರೋದರಿಂದಲೇ ಹುಬ್ಬಳ್ಳಿಗಿಂತ ಧಾರವಾಡದಲ್ಲಿ ಮಳೆ, ಬೆಳೆ ಹೆಚ್ಚು. ನಮ್ಮ ನಿಸ್ವಾರ್ಥ ಸೇವೆಯ ಬಗ್ಗೆ ಇವರಿಗೆ ಗೌರವವಿಲ್ಲ. ವಿಪರ್ಯಾಸನಾ? ದುರಂತನಾ? ನೀವೇ ಹೇಳಿ. ಸಿಆರ್‌ಎಫ್( ಸೆಂಟರಲ್ ರೋಡ್ ಫಂಡ್‌) ಯೋಜನೆಯಲ್ಲಿ ಧಾರವಾಡದ ಜುಬಿಲಿ ವೃತ್ತದಿಂದ ನರೇಂದ್ರ ಬೈಪಾಸ್ ರಸ್ತೆವರೆಗೆ ಸುಮಾರು 71 ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಗುದ್ದಲಿ ಪೂಜೆ ನೆರವೇರಿಸಿ ಹೋಗಿದ್ದು ನಮ್ಮ ಮರಣದಂಡನೆಗೆ ಆದೇಶ ನೀಡಿದಂತಾಗಿದೆ.

ಅದಾಗಲೇ ಅಧಿಕಾರಿಗಳು ಪರಿ ವೀಕ್ಷಣೆ ಮುಗಿಸಿದ್ದು ನಮ್ಮ ಕುಟುಂಬದ 815 ಸಹೋದರರನ್ನು ಕೊಲ್ಲಲು ನಿರ್ಧರಿಸಿದ್ದಾರೆ. ನಮಗೆ ಸಾವು ಸಮೀಪಿಸಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ನಮ್ಮ ಬಗ್ಗೆ ಪ್ರೀತಿ ಇರುವ ಪರಿಸರ ಪ್ರೇಮಿಗಳ 18 ಸಂಘಟನೆಗಳು ಸುಸ್ಥಿರ ಅಭಿವೃದ್ಧಿ ಎಂಬ ಸಂಘಟನೆ ಕಟ್ಟಿಕೊಂಡು ನಮ್ಮನ್ನು ಉಳಿಸಲು ಹೋರಾಟ ಕೈಗೆತ್ತಿಕೊಂಡಿವೆ. ಸಂಘಟನೆಗಳು ನಮ್ಮ ಧ್ವನಿಯಾದಾಗ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಭಯ ಕಾಡಿತ್ತು. ಯಾಕಂದ್ರೆ, ಚುನಾವಣೆ ಹತ್ತಿರದಲ್ಲಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದವರೇ ಪ್ರತಿಭಟನಾಕಾರರಿಗೆ ಬೆಟ್ಟದಂತಹ ಭರವಸೆ ನೀಡಿದರು. ನನ್ನ ಸಹೋದರರಲ್ಲಿ ಅತ್ಯಂತ ಗೌರವಾನ್ವಿತ 280 ಸದಸ್ಯರನ್ನು ಕೊಲ್ಲದೇ ಅಧುನಿಕ ತಂತ್ರಜ್ಞಾನ ಬಳಸಿ ಬೇರೆ ಕಡೆ ಆಶ್ರಯ ಕಲ್ಪಿಸುವುದಾಗಿ ಭರವಸೆ ನೀಡಿದರು. ನಮಗೆ ಎಲ್ಲ ಮರಗಳು ಮುಖ್ಯವಾದರೂ 280 ಮರಗಳು ಉಳಿಯುತ್ತೆ ಅನ್ನೋ ದುಃಖ ಮಿಶ್ರಿತ ಸಮಾಧಾನವಾಗಿತ್ತು. ಆದ್ರೆ, ಚುನಾವಣೆ ಮುಗಿದಿದೆ. ಮುಂದೇನು ಅನ್ನೋ ಭಯ ಶುರುವಾಗಿದೆ. ಯಾಕೆ ಅಂತಾ ನಿಮಗೆ ಬಿಡಿಸಿ ಹೇಳೋ ಅಗತ್ಯವಿಲ್ಲ ಅನ್ಕೋತೀನಿ.

ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಲು ಸುಸ್ಥಿರ ಅಭಿವೃದ್ಧಿ ವೇದಿಕೆಯ ನಮ್ಮ ಪ್ರೀತಿಪಾತ್ರರು ಮಾತು ಬಾರದ ನಮಗೆ ಭಾಷೆಯಾಗಿದ್ದಾರೆ. ನಮ್ಮ ಪ್ರತಿ ಸದಸ್ಯನ ಅಂತರಾಳದ ಕೂಗನ್ನು ಅಕ್ಷರ ರೂಪದಲ್ಲಿ ಹೊರ ಹಾಕಿದ್ದಾರೆ. ಅದನ್ನೇ ನಾಮಫಲಕ ಮಾಡಿ ನಮಗೆ ನೇತು ಹಾಕಿದ್ದಾರೆ. ಆ ಬರಹಗಳೇನೋ ಚೆನ್ನಾಗಿದೆ. ಆದ್ರೆ, ಇದನ್ನ ಓದಿದವರು ಬೇಗ ಮರೆತು ಬಿಟ್ಟರೇ ಹೇಗೆ? ವಾಟ್ಸಪ್‌, ಫೇಸ್‌ಬುಕ್‌ನಲ್ಲಿ ಪರಿಸರ ದಿನಾಚರಣೆಯ ಶುಭಾಶಯ ವಿನಿಮಯ ಮಾಡಿದ್ರೆ ಏನು ಉಪಯೋಗವಿಲ್ಲ. ಒಂದೇ ಒಂದು ದಿನ ಪರಿಸರ ದೇವೋಭವ ಎಂದರೂ ಪ್ರಯೋಜನವಿಲ್ಲ. ಒಂದಂತೂ ಸತ್ಯ… ನಾವು ಉಳಿದರೇ ಮಾತ್ರ ನೀವು ಉಳಿಯುತ್ತೀರಾ. ನಾವು ಸತ್ತರೇ… ನಿಮ್ಮ ಸಾವು ಗ್ಯಾರಂಟಿ. ಆದ್ರೆ, ಅದು ನಿಧಾನವಾಗಬಹುದು. ಆದ್ರೆ, ಖಚಿತ. ನಮ್ಮನ್ನ ಬದುಕಿಸಿ… ನೀವು ಬದುಕಿ.
ಇಂತಿ ನಿಮ್ಮ….
ಆಲದ ಮರ

ವಿಶೇಷ ವರದಿ: ಪ್ರಕಾಶ ನೂಲ್ವಿ