ನಾಲ್ಕು ಸದನಗಳನ್ನು ಪ್ರತಿನಿಧಿಸಿದ ವಿಶೇಷ ವ್ಯಕ್ತಿ ಆಯನೂರು!

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಂತರದಿಂದ ಜಯಗಳಿಸಿರುವ ಬಿಜೆಪಿಯ ಆಯನೂರು ಮಂಜುನಾಥ್ ಸಂಸತ್ ಹಾಗೂ ವಿಧಾನಸಭೆಯ ಉಭಯ ಸದನಗಳನ್ನು ಪ್ರತಿನಿಧಿಸಿದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ರಾಜ್ಯದ ಹಿರಿಯ ನಾಯಕರಾದ ಡಿ.ಬಿ.ಚಂದ್ರೇಗೌಡ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂತರ ಉಭಯ ಸದನವನ್ನು ಪ್ರತಿನಿಧಿಸಿದ ಅದೃಷ್ಠ ಆಯನೂರು ಮಂಜುನಾಥ್​ಗೆ ಒಲಿದು ಬಂದಿದೆ. ಶಿವಮೊಗ್ಗದವರಾದ ಆಯನೂರು ಮಂಜುನಾಥ್ ಜತೆಗೆ ಈ ಇಬ್ಬರು ನಾಯಕರಿಗೆ ರಾಜಕೀಯ ಹಾಗೂ ಕೌಟುಂಬಿಕವಾಗಿ ಜಿಲ್ಲೆಯ ನಂಟಿದೆ.

1994 ರಲ್ಲಿ ಬಿಜೆಪಿ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಆಯನೂರು ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಹೊಸನಗರ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಮೊದಲ ಯತ್ನದಲ್ಲೇ ಎಲ್ಲರ ಗಮನ ಸೆಳದರು.
ಸಿಎಂ ಎಚ್.ಡಿ.ದೇವೇಗೌಡ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಆಯನೂರು ತುಂಗಾ ಏತ ನೀರಾವರಿ ಯೋಜನೆಯ ಜಾರಿಗೆ ಆಗ್ರಹಿಸಿ ಮನವಿ ನೀಡಿದರು. ತದನಂತರ ಈ ಯೋಜನೆ ವಿಳಂಬವದಾಗ ವಿಧಾನಸಭೆಯ ಬಾವಿಯಲ್ಲಿ ಇಳಿದು ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆದರು. ಅಂದಿನ ಸಿಎಂ ಜೆ.ಎಚ್.ಪಟೇಲರ ಭರವಸೆ ಮೇರೆಗೆ ಧರಣಿ ಕೈ ಬಿಟ್ಟರು. ಉತ್ತಮ ವಾಗ್ಮಿಯಾಗಿರುವ ಆಯನೂರು ಮಂಜುನಾಥ್ ನಂತರದ ದಿನಗಳಲ್ಲಿ ಪ್ರಬುದ್ಧ ರಾಜಕಾರಣಿಯಾಗುವತ್ತ ಹೆಜ್ಜೆ ಇಟ್ಟರು. ಇದನ್ನು ಗಮನಿಸಿದ ಜಿಲ್ಲಾ ಬಿಜೆಪಿ ನಾಯಕರು ಆಯನೂರುರನ್ನು 1998 ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಅಂದಿನ ಪ್ರಭಾವಿ ರಾಜಕಾರಣಿ ಎಸ್.ಬಂಗಾರಪ್ಪ ವಿರುದ್ಧ ಕಣಕ್ಕಿಳಿಸಿದರು. ಇಲ್ಲೂ ಸಹ ಮೊದಲ ಯತ್ನದಲ್ಲೇ ಗೆದ್ದ ಆಯನೂರು ‘ ಇಂದಿಗೂ ನಾನು ಅಟಲ್ ಬಿಹಾರಿ ವಾಜಪೇಯಿ ಅವರ 13 ತಿಂಗಳ ಸರ್ಕಾರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತೇನೆ’ ಎನ್ನುತ್ತಾರೆ ಆಯನೂರು.
ನಂತರದಲ್ಲಿ ನಡೆದ 1999 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡರು. ಆಯನೂರು 2005 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿಯೂ ಸೋತರು. ಜಿಲ್ಲಾ ಬಿಜೆಪಿಯ ಹಿರಿಯ ನಾಯಕರ ಪ್ರಕಾರ ‘ಆಯನೂರು ಯಾರ ವಿರುದ್ಧ (ಬಂಗಾರಪ್ಪ) ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೂ ಅವರನ್ನೆ ಬಿಜೆಪಿಗೆ ಕರೆ ತಂದಾಗ ಆಯನೂರರ ಸ್ಥಾನ ಪಲ್ಲಟವಾದಂತಾಯಿತು. ಇದರಿಂದ ಬೇಸತ್ತ ಮಂಜುನಾಥ್ ಹಿರಿಯ ನಾಯಕರನ್ನು ವಿರೋಧಿಸಿ ಪಕ್ಷ ಬಿಟ್ಟು ಹೊರಬಂದು ಮೊದಲು ಜನತಾ ಪಕ್ಷ, ನಂತರ ಅಂದಿನ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣರ ಅಣತಿಯಂತೆ ಕೈ ಪಕ್ಷಕ್ಕೆ ಸೇರ್ಪಡೆಯಾದರು. 2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರ ಆಶಯದಂತೆ ಮತ್ತೆ ಬಿಜೆಪಿಗೆ ಮರಳಿದ ಆಯನೂರು 2010 ರಲ್ಲಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು.
ಇದೀಗ ವಿಧಾನ ಪರಿಷತ್ ಗೆ ಪ್ರವೇಶಿಸಿರುವ ಆಯನೂರು ಮಂಜುನಾಥ್ ತಾವು ಪ್ರಚಾರ ಕಾರ್ಯದಲ್ಲಿ ಪ್ರಸ್ತಾಪಿಸಿರುವ ವಿಷಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಯತ್ನಿಸುವುದಾಗಿ ಹೇಳುತ್ತಿದ್ದಾರೆ.
ವಿಶೇಷ ವರದಿ: ವಿ.ಸಿ.ಪ್ರಸನ್ನ, ಶಿವಮೊಗ್ಗ.
 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv