ಪ್ರೊ ಕಬಡ್ಡಿಗೆ ಕೊಡಗಿನ ಅವಿನಾಶ್ ಆಯ್ಕೆ, ₹10 ಲಕ್ಷಕ್ಕೆ ಬೆಂಗಾಲ್​ಗೆ ಸೇಲ್​​!

ಕೊಡಗು: ಪುಟ್ಟ ಕೊಡಗಿನ ಕ್ರೀಡಾ ಕ್ಷೇತ್ರದ ಸಾಧನೆ ಬಹಳ ಹಿರಿದು. ಹಾಕಿ, ಕ್ರಿಕೆಟ್, ಬ್ಯಾಡ್ಮಿಂಟನ್, ಸ್ಕ್ವಾಷ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕೊಡಗಿನ ಪ್ರತಿಭೆಗಳು ತಮ್ಮ ಸಾಮರ್ಥ್ಯ ತೋರಿದ್ದಾರೆ, ತೋರುತ್ತಿದ್ದಾರೆ ಕೂಡಾ. ಇದೀಗ ಈ ಸಾಲಿಗೆ ಕಬಡ್ಡಿ ಕೂಡಾ ಸೇರ್ಪಡೆಯಾಗುತ್ತಿದೆ. ಕಬಡ್ಡಿಯಲ್ಲಿ ಮಿಂಚು ಹರಿಸಲು ಜಿಲ್ಲೆಯ ಯುವ ಪ್ರತಿಭೆಯೊಬ್ಬರು ಸಜ್ಜಾಗಿದ್ದಾರೆ.

ದೇಶದ ಪ್ರತಿಷ್ಠಿತ ಪ್ರೊ ಕಬಡ್ಡಿ ಲೀಗ್‍ಗೆ ಕೊಡಗಿನ ಯುವ ಆಟಗಾರ 27 ವರ್ಷದ ಆಲ್‍ರೌಂಡರ್ ಎ.ಆರ್. ಅವಿನಾಶ್ ಆಯ್ಕೆಯಾಗಿದ್ದಾರೆ. ಏಳನೇ ಆವೃತ್ತಿಯ ಲೀಗ್‍ಗಾಗಿ ಮುಂಬೈನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿನಾಶ್ ಅರ್ಹತೆ ಪಡೆದಿದ್ದರು. ಇದರಲ್ಲಿ ಬೆಂಗಾಲ್ ವಾರಿಯರ್ಸ್ ತಂಡ 10 ಲಕ್ಷ ರೂ. ನೀಡಿ ಅವರನ್ನು ತನ್ನ ತಂಡಕ್ಕೆ ಖರೀದಿಸಿದೆ. ವಿಶೇಷ ಎಂದರೆ ಈ ಬಾರಿ ರಾಜ್ಯದಿಂದ ಮೂವರು ಕಬಡ್ಡಿ ಪಟುಗಳು ಹರಾಜಾಗಿದ್ದಾರೆ. ಮಂಡ್ಯದ ರಾಕೇಶ್(6 ಲಕ್ಷ ರೂ), ಪವನ್(7.26 ಲಕ್ಷ) ಹರಾಜಾದರೆ, ಕೊಡಗಿನ ರಾಕೇಶ್ ಮೂವರ ಪೈಕಿ ಅತಿ ಹೆಚ್ಚು ಅಂದ್ರೆ 10 ಲಕ್ಷ ರೂ.ಗೆ ಬೆಂಗಾಲ್ ತಂಡದ ಪಾಲಾದರು.

ಅವಿನಾಶ್ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದ ಕೃಷಿಕರಾದ ರಾಜೇಗೌಡ ಮತ್ತು ಪುಷ್ಪಾ ದಂಪತಿಯ ಏಕೈಕ ಪುತ್ರ. ಬಾಲ್ಯದಿಂದಲೇ ಕಬಡ್ಡಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಪಿಯುಸಿ ಬಳಿಕ ಬೆಂಗಳೂರು ಕ್ರೀಡಾ ವಸತಿ ಶಾಲೆ ಸೇರಿ ಅಲ್ಲಿಯೂ ಕಬಡ್ಡಿಯಲ್ಲಿ ತೊಡಗಿಸಿಕೊಂಡ್ರು. ಡಿಗ್ರಿ ಬಳಿಕ ಕುಶಾಲನಗರಕ್ಕೆ ಬಂದು ಇಲ್ಲಿ ಜ್ಞಾನಭಾರತಿ ಕ್ಲಬ್‍ನಲ್ಲಿ ಕಬಡ್ಡಿ ತಂಡದ ಸದಸ್ಯರಾಗಿ ಸೇರಿಕೊಂಡರು. ಜ್ಞಾನಭಾರತಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಉತ್ತಪ್ಪ ಎಂಬವರ ಬಳಿ ತರಬೇತಿಯನ್ನು ನಿರಂತರವಾಗಿ ಪಡೆದರು. ಬಳಿಕ ಕೊಡಗು ಜಿಲ್ಲಾ ಕಬಡ್ಡಿ ತಂಡದಲ್ಲಿ ಪಾಲ್ಗೊಂಡು ವಿವಿಧ ಪಂದ್ಯಾವಳಿಗಳಲ್ಲಿ ಉತ್ತಮ ಆಟಗಾರರಾಗಿ ರೂಪುಗೊಂಡರು. ಕೆಲ ತಿಂಗಳ ಹಿಂದೆ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನೂ ಪ್ರತಿನಿಧಿಸಿದ್ದರು.

ಇವರ ಉತ್ತಮ ಪ್ರದರ್ಶನವನ್ನು ಭಾರತ ರಾಷ್ಟ್ರೀಯ ತಂಡದ ಮಾಜಿ ಆಟಗಾರ ಹಾಗೂ ಬೆಂಗಾಲ್ ತಂಡದ ಹಾಲಿ ಕೋಚ್ ಬಿ.ಸಿ. ರಮೇಶ್ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಗೆ ಪ್ರಸ್ತಾಪ ಮಾಡಿದ್ದರಂತೆ. ಕಳೆದ ಮಾರ್ಚ್‍ನಲ್ಲಿ ಮುಂಬೈನಲ್ಲಿ 15 ದಿನಗಳ ಕಾಲ ವಿಶೇಷ ತರಬೇತಿಯನ್ನೂ ನೀಡಲಾಗಿತ್ತು. ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಹೀಗಾಗಿ ಬೆಂಗಾಲ್ ತಂಡ ನನ್ನ ಮೇಲೆ ಭರವಸೆ ಇಟ್ಟು ಖರೀದಿ ಮಾಡಿದ್ದಾರೆಂದು ಅವಿನಾಶ್ ಫಸ್ಟ್ ನ್ಯೂಸ್ ಜತೆ ಅನಿಸಿಕೆ ಹಂಚಿಕೊಂಡರು.
ಕಬಡ್ಡಿಯಲ್ಲಿ ಸಾಧನೆ ಮಾಡುವುದಕ್ಕೆ ಮಾವ ದಿನೇಶ್ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವಾಗ 116 ಕೆ.ಜಿ. ಇದ್ದೆ. ಪ್ರೊ ಕಬಡ್ಡಿ ಸೆಲೆಕ್ಷನ್ ಕ್ಯಾಂಪ್‍ಗೆ ಹೋಗ ಬಳಿಕ 84 ಕೆಜಿಗೆ ಇಳಿಸಿಕೊಂಡಿದ್ದೇನೆ ಅಂತ ಹೇಳುವ ಅವಿನಾಶ್, ಮುಂದಿನ ದಿನದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವುದಾಗಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ವಿಶೇಷ ವರದಿ: ಕಿಶೋರ್​ ರೈ, ಕತ್ತಲೆ ಕಾಡು


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv