97ರ ವಯಸ್ಸಿನಲ್ಲೂ ಡ್ರೈವಿಂಗ್​ ಲೈಸೆನ್ಸ್​ ರಿನೀವಲ್ ಮಾಡಿಸಿದ ಅಜ್ಜ..!​

ಶ್ರಮ ಜೀವಿಗಳು, ಸ್ವಾವಲಂಬಿಗಳು, ಸ್ವಾಭಿಮಾನಿಗಳು ಯಾರನ್ನೇ ಕೇಳಿ, ಮೈಯಲ್ಲಿ ಶಕ್ತಿ, ದೇಹದಲ್ಲಿ ಉಸಿರಿರುವವರೆಗೆ ದುಡೀಬೇಕು, ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಅಂತ ಹೇಳೇ ಹೇಳ್ತಾರೆ. ಈ ಅಜ್ಜನೂ ಅಷ್ಟೇ. ಕಡೆಯವರೆಗೂ ನಾನು ದುಡೀಬೇಕು ಅಂತಲೇ ದುಬೈಗೆ ಹೋದೋರು. ಆದ್ರೆ ವಿಷಯ ಅದಲ್ಲ. ಕೀನ್ಯಾ-ಭಾರತೀಯ ಮೂಲದ ಈ ಅಜ್ಜ, ಈಗ ತನ್ನ 97ನೇ ವಯಸ್ಸಿನಲ್ಲಿ ಡ್ರೈವಿಂಗ್ ಲೈಸೆನ್ಸ್ ರಿನೀವಲ್ ಮಾಡಿಸಿಕೊಂಡಿದ್ದಾರೆ.

97 ವರ್ಷದ ತೆಹ್ಮೆತೆನ್ ಹೋಮಿ ಧುನ್​ಜಿಬಾಯ್ ಮೆಹ್ತಾ, ದುಬೈನಲ್ಲಿ ವಾಸವಾಗಿದ್ದು, ಅಲ್ಲೇ ತಮ್ಮ ಡ್ರೈವಿಂಗ್ ಲೈಸೆನ್ಸ್ ರಿನೀವಲ್ ಮಾಡಿಸಿದ್ದಾರೆ. 1922ರಲ್ಲಿ ಜನಸಿದ ಮೆಹ್ತಾ, ಇನ್ನು 3 ವರ್ಷಗಳಲ್ಲಿ ದುಬೈನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿದ ಮೊದಲ ಶತಾಯುಷಿ ಅನ್ನೋ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಸದ್ಯ ಅವರು ರಿನೀವಲ್ ಮಾಡಿಸಿಕೊಂಡಿರುವ ಲೈಸೆನ್ಸ್ 4 ವರ್ಷದ ಅವಧಿಗಿದ್ದು, 2023ರವರೆಗೆ ವ್ಯಾಲಿಡಿಟಿ ಇರಲಿದೆ.

1980ರಲ್ಲಿ ದುಬೈಗೆ ಹೋದ ಮೆಹ್ತಾ, ಅಲ್ಲೇ ಫೈವ್ ಸ್ಟಾರ್ ಹೋಟೆಲ್ ಒಂದ್ರಲ್ಲಿ ಅಕೌಂಟ್ಸ್ ಕೆಲಸ ಮಾಡ್ತಿದ್ರು. 2002ರಲ್ಲಿ ಹೋಟೆಲ್​ನಲ್ಲಿ ರೊಟೀನ್ ಬ್ಯಾಕ್​ಗ್ರೌಂಡ್ ಚೆಕ್ ನಡೆದಾಗ, ಇವರ ವಯಸ್ಸಿನ ಬಗ್ಗೆ ತಿಳಿದು ಬಂದಿದ್ದರಿಂದ ಅನಿವಾರ್ಯವಾಗಿ ನಿವೃತ್ತಿ ಹೊಂದಿದ್ರಂತೆ. ಮದುವೆಯೇ ಆಗದ ಮೆಹ್ತಾ, ದುಬೈನಲ್ಲಿ ಒಂಟಿ ಜೀವನ ನಡೆಸ್ತಿದ್ದಾರೆ. ರಿಟೈರ್ ಆದ್ಮೇಲೆ ಬಂದ ಹಣದಿಂದ ಅಲ್ಲೇ ಒಂದು ಸಿಂಗಲ್ ಬೆಡ್ ರೂಮ್ ಮನೆಯನ್ನ ಕೊಂಡುಕೊಂಡು ವಾಸ ಮಾಡ್ತಿದ್ದಾರೆ.

ಇನ್ನು, ತನ್ನ 97ನೇ ವಯಸ್ಸಿನಲ್ಲೂ ಡ್ರೈವಿಂಗ್ ಲೈಸೆನ್ಸ್ ರಿನೀವಲ್ ಮಾಡಿಸಿರುವ ಈ ಅಜ್ಜ, ಕಡೆಯ ಬಾರಿಗೆ ತಮ್ಮ ವಾಹನವನ್ನ ಓಡಿಸಿದ್ದು ಯಾವಾಗ ಅಂತ ಕೇಳಿದ್ರೆ ಒಂದು ಸೆಕೆಂಡ್ ಆಶ್ಚರ್ಯ ಆಗೋದ್ರಲ್ಲಿ ಡೌಟೇ ಇಲ್ಲ. ಮೆಹ್ತಾ ಕಡೆಯ ಬಾರಿಗೆ ವಾಹನ ಚಾಲನೆ ಮಾಡಿದ್ದು 2004ರಲ್ಲಂತೆ. ಅದಾದ ಮೇಲೆ ಇಲ್ಲಿವರೆಗೂ ಅವರು ವಾಹನ ಚಾಲನೆ ಮಾಡಿಲ್ಲ. ಸಾರ್ವಜನಿಕ ಸಾರಿಗೆ, ಕ್ಯಾಬ್​ಗಳನ್ನೇ ಅವಲಂಬಿಸಿದ್ದಾರೆ. ಜೊತೆಗೆ ನನಗೆ ನಡೆಯುವುದರಲ್ಲೇ ಹೆಚ್ಚು ಆಸಕ್ತಿ, ಅದು ನನ್ನನ್ನ ಆರೋಗ್ಯವಾಗಿಯೂ ಇಡುತ್ತೆ. ಕಾರುಗಳು ಮನುಷ್ಯನನ್ನ ಸೋಮಾರಿಯನ್ನಾಗಿ ಮಾಡುತ್ತೆ ಅಂತಾರೆ. ಆದ್ರೂ ಅಜ್ಜ ಲೈಸೆನ್ಸ್ ರಿನೀವಲ್ ಮಾಡಿಸಿರೋದು, ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv