ಕಾರಣ ನೀಡದೇ 94 ಜಿಮ್ಸ್​ ನರ್ಸ್​​ಗಳ ವಜಾ: ಬದುಕಿಗಾಗಿ ಅನಿರ್ದಿಷ್ಟಾವಧಿ ಹೋರಾಟ

ಕಲಬುರ್ಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್)ನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಶುಷ್ರೂಶಕರಾಗಿ ಸೇವೆ ಸಲ್ಲಿಸುತ್ತಿದ್ದ 94 ಜನರನ್ನು ಸೇವೆಯಿಂದ ಹೊರಹಾಕಿದ್ದನ್ನು ಖಂಡಿಸಿ ಹೈದರಾಬಾದ್ ಕರ್ನಾಟಕ ಶುಷ್ರೂಶಕರ ಅಭಿವೃದ್ಧಿ ಸಂಘ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದೆ.
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿರುವ ಪ್ರತಿಭಟನಾಕಾರರು, ತಮ್ಮನ್ನು ಸೇವೆಯಲ್ಲಿ ಮುಂದುವರೆಸಬೇಕೆಂದು ಜಿಲ್ಲಾಧಿಕಾರಿ ಮುಖೇನ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. 94 ಸಿಬ್ಬಂದಿ ಜಿಮ್ಸ್ ಆಡಳಿತ ಮಂಡಳಿಯಿಂದ ಟ್ರೇನಿ ನರ್ಸ್, ಸ್ಟಾಫ್ ನರ್ಸ್ ಹುದ್ದೆಗೆ ಆಯ್ಕೆಯಾಗಿದ್ದು, ಟ್ರೇನಿ ಅವಧಿ ಮುಗಿದ ಬಳಿಕವೂ ಸೇವೆಯನ್ನು ಮುಂದುವರೆಸಲಾಗಿತ್ತು. ಜಿಮ್ಸ್​ನಲ್ಲಿ ಮಂಜೂರಿಯಾದ ಖಾಲಿ ಹುದ್ದೆಗಳ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಹುದ್ದೆಗೆ ತಾವು ಶೈಕ್ಷಣಿಕ ಅರ್ಹತೆ ಹೊಂದಿದ್ದು, ಜಿಮ್ಸ್​ನಲ್ಲಿ ಎರಡು ಮೂರು ವರ್ಷಗಳಿಂದ ಸೇವೆ ಸಲ್ಲಿಸಿ ಉತ್ತಮ ಅನುಭವ ಹೊಂದಿದ್ದೆವು. ಆದರೆ ಈಗ ಹೊರ ಸಂಪನ್ಮೂಲ ಎಜೆನ್ಸಿಯಾಗಿರುವ ‘ನೈಸ್’ಗೆ ಹೊರಗುತ್ತಿಗೆ ವಹಿಸಿ ತಮ್ಮನ್ನು ಸೇವೆಯಿಂದ ಹೊರಗಿಟ್ಟಿದ್ದಾರೆ ಅಂತಾ ಆರೋಪಿಸಿದರು.
ಟ್ರೇನಿ ಅವಧಿ ಮುಗಿದ ಬಳಿಕ ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರೆ ಬೇರೆ ಕಡೆ ಕೆಲಸ ಹುಡುಕಿಕೊಳ್ಳುತ್ತಿದ್ದೆವು. ಟ್ರೇನಿ ಅವಧಿ ಮುಗಿದ ಬಳಿಕವೂ ತಮ್ಮ ಸೇವೆ ಪಡೆದುಕೊಂಡು ಸ್ಟೈಫಂಡ್ ಆಧಾರದ ಮೇಲೆ ಮಾಸಿಕ 8 ಸಾವಿರ ಹಣ ಪಾವತಿ ಮಾಡಿ ಬಾಕಿ ವೇತನ ಪಾವತಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಕಾಲೇಜು, ಆಸ್ಪತ್ರೆ ಯ ನರ್ಸಿಂಗ್ ಸಿಬ್ಬಂದಿ ಸೇವೆ ಹೊರಗುತ್ತಿಗೆ ನೀಡುವುದು ನಿಷೇಧವಿದೆ. ಈ ಕುರಿತು ಕಲಬುರ್ಗಿ ಸಹಾಯಕ ಕಾರ್ಮಿಕ ಆಯುಕ್ತರು ಜಿಮ್ಸ್ ನಿರ್ದೇಶಕರಿಗೆ ಹೊರಗುತ್ತಿಗೆ ಕೈಬಿಡುವಂತೆ ಸೂಚಿಸಿದ್ದರೂ ಹೊರಗುತ್ತಿಗೆ ಪ್ರಕ್ರಿಯೆ ಅನುಷ್ಠಾನಗೊಳಿಸಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv