9 ವರ್ಷದ ಮಗುವಿಗೆ 52 ವರ್ಷದ ಅಜ್ಜನ ಮೂತ್ರ ಪಿಂಡ ಅಳವಡಿಕೆ..!

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ‌ ಪ್ರಪ್ರಥಮ ಬಾರಿಗೆ 9 ವರ್ಷ ಬಾಲಕನಿಗೆ 52 ವರ್ಷ ವಯಸ್ಸಿನ ಅಜ್ಜನ ಮೂತ್ರಪಿಂಡ ಕಸಿ ಮಾಡಿವಲ್ಲಿ ನಗರದ ವೈದ್ಯರು ಯಶಸ್ವಿಯಾಗಿದ್ದಾರೆ. ನಗರದ ತತ್ವದರ್ಶ ಆಸ್ಪತ್ರೆ ಸುಮಾರು ವರ್ಷಗಳಿಂದ ಮೂತ್ರಪಿಂಡ ಕಸಿ ಸೌಲಭ್ಯ ಒದಗಿಸುತ್ತಾ ಬಂದಿದ್ದು, 5ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ 9ವರ್ಷದ 15 ಕೆಜಿ ತೂಕವಿರುವ ಬಾಲಕನಿಗೆ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಹತ್ವದ ಕಾರ್ಯ ಸಾಧನೆ ಮಾಡಿದೆ.

ಬಾದಾಮಿ ತಾಲೂಕಿನ ನವಿಲುಹೊಳೆಯ ಮಲ್ಲು ಕೋಟಿಕರ್ (9) ವರ್ಷದ ಮಗು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಅವರ ಅಜ್ಜ ಹುಚ್ಚಪ್ಪನರಿ (52) ಎಂಬುವವರ ಒಂದು ಮೂತ್ರಪಿಂಡವನ್ನು ಫೆಬ್ರವರಿ.09ರಂದು ಬಾಲಕನಿಗೆ ಜೋಡಣೆ ಮಾಡುವ ಮೂಲಕ ಮರುಜೀವ ನೀಡಲಾಗಿದೆ‌. ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರಾದ ವೆಂಕಟೇಶ ಮೊಗೇರ, ಡಾ.ದಿಲೀಪ ಜವಳಿ, ಡಾ.ಮಂಜು ಪ್ರಸಾದ, ಡಾ.ಭರತ ಕ್ಷತ್ರಿ, ಡಾ.ಸಂಜೀವ ಕುಲಗೋಡ, ಡಾ.ಶ್ರೀನಿವಾಸ ಹರಪ್ಪನಹಳ್ಳಿ, ಡಾ.ಬಸವರಾಜ ಕಲ್ಲಾಪೂರ, ಡಾ.ವಿನೋದ ರಟ್ಟಿಹಳ್ಳಿ, ಡಾ.ಪತೇಪೂರ ನೇತೃತ್ವದಲ್ಲಿ ಚಿಕಿತ್ಸೆ ಮಾಡಲಾಗಿದ್ದು, ಬಾಲಕ ಚೇತರಿಸಿಕೊಂಡಿದ್ದಾನೆ. ಬಾಲಕನ ತಂದೆ ಇಂಡೋ ಟಿಬೆಟಿಯನ್ ಬಾರ್ಡರ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯರ ಈ ಸಾಧನೆಗೆ ಕುಟುಂಬ ಸದಸ್ಯರು ಧನ್ಯವಾದ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರಾದ ಸಂಜೀವ ಕುಲಗೋಡ, ರವಿ ನೇಮಗೌಡ, ಶ್ರೀನಿವಾಸ ಹರಪ್ಪನಹಳ್ಳಿ, ಸೀತಲ್​​ ಕುಲಗೋಡ ಸೇರಿದಂತೆ ಇತರರು ಇದ್ದರು.