ಕೊಳವೆ ಬಾವಿಗೆ ಬಿದ್ದ 5 ವರ್ಷದ ಮಗುವಿನ ರಕ್ಷಣೆ..!

ಉತ್ತರಪ್ರದೇಶ : ಮಥುರಾದ ಅಗರ್ಯಾಲ್ ಅನ್ನೋ ಗ್ರಾಮದಲ್ಲಿ ಐದು ವರ್ಷದ ಮಗುವೊಂದು ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಘಟನೆ ನಡೆದಿದೆ. ಸುಮಾರು ನೂರು ಅಡಿ ಆಳದ ಬೋರ್​ವೆಲ್ ಬಾವಿಗೆ ಬಿದ್ದಿರೋ ಮಗುವಿನ ರಕ್ಷಣೆ ಮಾಡಲಾಗಿದೆ. ಸ್ಥಳೀಯ ನಿವಾಸಿಯಾದ ದಯಾರಾಮ್ ಎಂಬವರ ಮಗ ಪರ್ವಿನ್ ಅಕ್ಕಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಇನ್ನು, ಪರ್ವಿನ್ ಕೊಳವೆ ಬಾವಿಗೆ ಬಿದ್ದಿರೋ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದವು. ಅಲ್ಲದೇ ಘಾಜಿಯಾಬಾದ್​ನಿಂದ ಎನ್​ಡಿಆರ್​ಎಫ್ ತಂಡಕ್ಕೂ ರಕ್ಷಣೆಗೆ ಧಾವಿಸುವಂತೆ ಸೂಚನೆ ನೀಡಲಾಗಿತ್ತು. ಸತತ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ ಎನ್​ಡಿಆರ್​ಎಫ್ ಹಾಗೂ ಅಗ್ನಿಶಾಮಕ ದಳ ಬಾಲಕ ಪರ್ವಿನ್​ನನ್ನ ರಕ್ಷಿಸಿ ತರುವಲ್ಲಿ ಯಶಸ್ವಿಯಾಗಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯೂ ಕೂಡ ಸಹಾಯ ಮಾಡಿತ್ತು ಅಂತ ಎನ್​ಡಿಆರ್​ಎಫ್​ನ ಅಸಿಸ್ಟಂಟ್ ಕಮಾಂಡರ್ ಅನಿಲ್​ಕುಮಾರ್ ಸಿಂಗ್ ಹೇಳಿದ್ದಾರೆ.