ಪ್ರೋಟೀನ್​ಗಾಗಿ ಮೊಟ್ಟೆಯಷ್ಟೆ ಅಲ್ಲ, ಈ ಆಹಾರಗಳನ್ನೂ ಸೇವಿಸಬಹುದು

ಮೊಟ್ಟೆಯಲ್ಲಿ ಪ್ರೋಟೀನ್​ ಅಂಶ ಹೆಚ್ಚಾಗಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಹೆಚ್ಚು ಜನರು ಪ್ರೋಟೀನ್​​ಗಾಗಿ ಮೊಟ್ಟೆ ತಿನ್ನುತ್ತಾರೆ. ಇನ್ನು ಮೊಟ್ಟೆಯಲ್ಲಿ ಕ್ಯಾಲೋರಿಸ್​ ಕಡಿಮೆ ಇರುತ್ತದೆ. ದಿನದ ಯಾವುದೇ ಸಮಯದಲ್ಲಿ ಮೊಟ್ಟೆಯನ್ನ ತಿನ್ನಬಹುದು. ಹಾಗಂತ ಮೊಟ್ಟೆಯಲ್ಲಿ ಮಾತ್ರ ಪ್ರೋಟೀನ್​ ಜಾಸ್ತಿ ಇರುತ್ತಾ.. ಬೇರೆ ಆಹಾರದಲ್ಲಿ ಇರಲ್ವಾ…? ಖಂಡಿತಾ ಇದೆ..ಅದು ಯಾವುದು ಅನ್ನೋದು ಇಲ್ಲಿದೆ ನೋಡಿ.

1. ಮೊಟ್ಟೆ ಇನ್ನೋಕೆ ಇಷ್ಟವಿಲ್ಲ ಅಂದರೆ ನೀವು ಫ್ರೈಡ್​ ಚಿಕನ್​ ತಿನ್ನಬಹುದು. ಯಾಕಂದ್ರೆ ಚಿಕನ್​ನಲ್ಲಿ ಕೂಡಾ ಪ್ರೋಟೀನ್​ ಸಮೃದ್ಧವಾಗಿದೆ. ಅರ್ಧ ಕಪ್​ ಬೇಯಿಸಿದ ಚಿಕನ್​ನಲ್ಲಿ 22 ಗ್ರಾಂನಷ್ಟು ಪ್ರೋಟೀನ್​ ಇರುತ್ತೆ. ಅಂದ್ರೆ ಮೊಟ್ಟೆಗಿಂತಲೂ ಚಿಕನ್​ನಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಆದರೆ ಆದಷ್ಟು ಎಣ್ಣೆ ಬಳಸದ ಡ್ರೈ ಚಿಕನ್​ ಇನ್ನೋದು ಉತ್ತಮ.

2. ಪನ್ನಿರ್​ನಲ್ಲೂ ಪ್ರೋಟೀನ್​ ಅಂಶ ಹೇರಳವಾಗಿದೆ. ಸಸ್ಯಾಹಾರಿಗಳು ಅರಾಮಾಗಿ ಪನ್ನೀರ್​ ತಿನ್ನಬಹುದು. ಅಲ್ಲದೆ, ಇದು ಇತರೆ ಡೈರಿ ಪ್ರಾಡೆಕ್ಟ್ಸ್​ಗೆ ಹೋಲಿಸಿದ್ರೆ ಕೊಂಚ ಕಡಿಮೆ ಬೆಲೆಗೆ ಸಿಗುತ್ತೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರದಲ್ಲಿ ಪನ್ನೀರ್​ ಸೇವಿಸುವುದರಿಂದ ಹೆಚ್ಚು ಪ್ರೋಟೀನ್​ ಪಡೆಯಬಹುದು. 28 ಗ್ರಾಂ ಪನ್ನೀರ್​ನಲ್ಲಿ 14 ಗ್ರಾಂಗಳಷ್ಟು ಪ್ರೋಟೀನ್​ ಇರುತ್ತದೆ.

3. ಚೀಸ್​ನಲ್ಲಿ ಫ್ಯಾಟ್​ ಹೆಚ್ಚಾಗಿದೆ ಅಂತಾ ಕೆಲವರು ಚೀಸ್​ ತಿನ್ನೋಕೆ ಭಯಪಡ್ತಾರೆ. ಆದ್ರೆ ಚೀಸ್​ ಅನ್ನ ಸಂಪೂರ್ಣವಾಗಿ ಅನ್​ಹೆಲ್ದಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾಕಂದ್ರೆ 30 ಗ್ರಾಂ ಚೆಡ್ಡಾರ್​ ಅಥವಾ ಮಾಜರಿಲ್ಲಾ ಚೀಸ್​ನಲ್ಲಿ 6.5 ಗ್ರಾಂನಷ್ಟು ಪ್ರೋಟೀನ್ ಅಂಶವಿರುತ್ತದೆ. ಅಲ್ಲದೇ ಇದರಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಮೂಳೆಗಳನ್ನ ಬಲಪಡಿಸಲು ಚೀಸ್​ ಸಹಾಯಕಾರಿಯಾಗಿದೆ.

4. ಕಾಳುಗಳಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಪೊಟ್ಯಾಸಿಯಂ ಅಂಶ ಹೆಚ್ಚಾಗಿದೆ. ಬೇಯಿಸಿದ ನಂತರವೂ ವಿಟಮಿನ್ ಸಿ ಅಂಶವನ್ನ ಅದು ಹಾಗೇ ಉಳಿಸಿಕೊಳ್ಳುತ್ತದೆ. ಕಾಳುಗಳಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್​ ಅಂಶವು ಮಿದುಳಿನ ಕೋಶಗಳು ಡ್ಯಾಮೇಜ್​ ಆಗದಂತೆ ಕಾಪಾಡುತ್ತದೆ. ಬೇಯಿಸಿದ ಅರ್ಧ ಕಪ್ ಕಾಳಿನಲ್ಲಿ 7.3 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಅಲ್ಲದೇ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

5. ಬ್ರೊಕೋಲಿ ಹೆಚ್ಚು ಪೌಷ್ಟಿಕವಾಗಿದೆ. ಇದರಲ್ಲಿ ವಿಟಮಿನ್ ಕೆ, ಸಿ ಮತ್ತು ಫೈಬರ್ ಮತ್ತು ಪ್ರೊಟೀನ್​ ಹೆಚ್ಚಾಗಿದೆ. ಇತರೆ ತರಕಾರಿಗಳಿಗೆ  ಹೋಲಿಸಿದರೆ, ಇದರಲ್ಲಿ ಪ್ರೋಟಿನ್ ಅಂಶವು ಅತ್ಯಧಿಕವಾಗಿದೆ. ಒಂದು ಕಪ್ ಬ್ರೊಕೋಲಿ 3 ಗ್ರಾಂ ಪ್ರೋಟೀನ್ ಹೊಂದಿರುತ್ತದೆ.