ಪಾದಚಾರಿಗಳ ಮೇಲೆ ಲಾರಿ ಹರಿದು ನಾಲ್ವರ ದುರ್ಮರಣ

ಜೇವರ್ಗಿ: ಪಾದಚಾರಿಗಳ ಮೇಲೆ ಲಾರಿ ಹರಿದು ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಶ್ರೀಕಾಂತ ಬಡಿಗೇರ (32), ಗೋಲು ರಾಜಸ್ಥಾನಿ(18), ಮೋಹಿನ್ ಬಾಗವಾನ್ (18), ಪೀರಸಾಬ ಅನ್ಶೀರ್ ಪಟೇಲ್ (35) ಎಂದು ಗುರುತಿಸಲಾಗಿದೆ.

ಜೇರಟಗಿ ಬಳಿಯ ರಾಷ್ಟ್ರೀಯ ‌ಹೆದ್ದಾರಿ 218ರಲ್ಲಿ ಬೆಳಗ್ಗೆ 7.30ರ ವೇಳೆ ವಿಜಯಪುರದಿಂದ ಕಲಬುರಗಿಗೆ ಬರುತ್ತಿದ್ದ ಲಾರಿ ನಾಲ್ವರು ಪಾದಚಾರಿಗಳ ಮೇಲೆ ಹರಿದಿದೆ. ಈ ವೇಳೆ ನಾಲ್ವರು ಮೃತಪಟ್ಟಿದ್ದು, ಇನ್ನು ಅನಿಲ್, ಪ್ರಕಾಶ್ ಮತ್ತು ವಿಜಯಕುಮಾರ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಜೇವರ್ಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಬಳಿಕ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಪಘಾತಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಜೇವರ್ಗಿ ತಾಲೂಕಿನ ಶ್ರೀರಾಮಸೇನಾ ಸಂಘಟನಾ ಕಾರ್ಯದರ್ಶಿ ಆನಂದ್ ದೇಸಾಯಿ ಆರೋಪಿಸಿದರು. ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಡಾ.ಅಜಯ್ ಸಿಂಗ್‌ಗೆ ಹಲವು ಬಾರಿ, ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆನಂದ್ ದೇಸಾಯಿ ಆಗ್ರಹಿಸಿದ್ರು.

ಘಟನಾ‌ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ.ಅಜಯ್ ಸಿಂಗ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಮೃತರ ಕುಟುಂಬಕ್ಕೆ ತಲಾ ₹ 50 ಸಾವಿರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಹಾಗೇ ಸಿಎಂ ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು. ಪ್ರಕರಣ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv