371ಜೆ ಸಮರ್ಪಕವಾಗಿ ಜಾರಿ ಮಾಡದೇ ಸರ್ಕಾರ ಅನ್ಯಾಯ ಮಾಡಿದೆ: ರಜಾಕ್ ಉಸ್ತಾದ

ರಾಯಚೂರು: ಸಮರ್ಪಕವಾಗಿ 371ಜೆ ಜಾರಿಯಾಗದ ಕಾರಣ ಈ ಭಾಗದ ಜನರಿಗೆ ಪರೋಕ್ಷವಾಗಿ ಅನ್ಯಾಯವಾಗುತ್ತಿದೆ ಅಂತಾ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಸರ್ಕಾರಿ ನೌಕರರಿಗೆ ಬಡ್ತಿ ನೀಡುವಲ್ಲಿ ಹಾಗೂ ಹುದ್ದೆ ನೀಡುವಲ್ಲಿ, ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಹೈ.ಕ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ, ಮುಖೋಪಾಧ್ಯಾಯರಾಗಿ ಬಡ್ತಿ ನೀಡುವುದನ್ನು ಕಳೆದ ಮೂರು ವರ್ಷಗಳಿಂದ ತಡೆಹಿಡಿಯಲಾಗಿದೆ. ಆದರೆ ಬೇರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಇಲಾಖೆ ಬಡ್ತಿ ನೀಡಲಾಗಿದೆ. ಇನ್ನು ಹೈ. ಕ. ಭಾಗದಲ್ಲಿ ಹಲವರು ಹಿರಿಯ ಸಹ ಶಿಕ್ಷಕರು ಬಡ್ತಿ ಸಿಗದೆ ನಿವೃತ್ತರಾಗಿದ್ದಾರೆ. ಹೀಗೆ 371ಜೆ ಭಾಗದ ಜನರಿಗೆ ಸರ್ಕಾರ ತಾರತಮ್ಯ ಮಾಡುತ್ತ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಇಲಾಖಾವಾರು ಹುದ್ದೆಗಳ ಹೊಸ ನೇಮಕಾತಿಯಲ್ಲಿಯೂ ಈ ಭಾಗದ ಜನರಿಗೆ ಬೇರೆ ವಿಭಾಗಗಳಲ್ಲಿ ಕೆಲಸಕ್ಕೆ ಅವಕಾಶ ಸಿಗುತ್ತಿಲ್ಲ ಎಂದರು. ಹೀಗಾಗಿ ಸರ್ಕಾರ 371ಜೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ಮುಂದಾಗಬೇಕು. ಅಲ್ಲದೆ ಸಿಎಂ ಅವರು ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಇನ್ಮುಂದೆ ಈ ರೀತಿ ಹೈ.‌ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv