ಗ್ರೀಸ್​, ಕ್ಯೂಬಾಕ್ಕೆ ಭೇಟಿ ನೀಡಲಿದ್ದಾರೆ ಪ್ರೆಸಿಡೆಂಟ್​ ಕೋವಿಂದ್​

ದೆಹಲಿ: ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ರಾಮ್​ನಾಥ ಕೋವಿಂದ್ ಏಳು ದಿವಸಗಳ ಪ್ರವಾಸ ಹಮ್ಮಿಕೊಂಡಿದ್ದು, ಗ್ರೀಸ್​, ಸುರಿನೇಮ್​ ಹಾಗೂ ಕ್ಯೂಬಾಕ್ಕೆ ಭೇಟಿ ನೀಡಲಿದ್ದಾರೆ. ​
ತಮ್ಮ ಮೊದಲ ಪ್ರವಾಸವನ್ನ ಗ್ರೀಸ್​ನಿಂದ ಆರಂಭಿಸಲಿರುವ ರಾಮ್​ನಾಥ್​ ಕೋವಿಂದ್​, ಜೂನ್​ 16ರಿಂದ 19ರವರೆಗೆ ವಾಸ್ತವ್ಯ ಹೂಡಲಿದ್ದಾರೆ ಅಂತಾ ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ಸುಭ್ರತಾ ಭಟ್ಟಚಾರ್ಜಿ ತಿಳಿಸಿದ್ದಾರೆ. ಜೂನ್​ 17ರಂದು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಗ್ರೀಸ್​ನಲ್ಲಿ ವಾಸವಿರುವ ಸುಮಾರು 12ಸಾವಿರ ಅನಿವಾಸಿ ಭಾರತೀಯರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 18ರಂದು ಗ್ರೀಕ್ ಅಧ್ಯಕ್ಷ ಪ್ರೊಕೊಪಿಸ್ ಪವ್ಲೋಪೌಲೋಸ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಗ್ರೀಕ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಮತ್ತು ಅಲ್ಲಿನ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಫಲೆರಾನ್ ಕಾಮನ್​ವೆಲ್ತ್ ವಾರ್ ಸ್ಮಶಾನಕ್ಕೂ ಭೇಟಿ ನೀಡಲಿದ್ದಾರೆ.
ಜೂನ್​ 19ರಂದು ಯುರೋಪ್​ನಲ್ಲಿ ಇಂಡಿಯನ್​ ಹಾಗೂ ಗ್ರೀಸ್​ ಸಿಇಒಗಳ ಜೊತೆ ಸಭೆ​ ನಡೆಸಲಿದ್ದಾರೆ. ಅಥೇನ್ಸ್​ನಲ್ಲಿ ನಡೆಯುವ ಇಂಡಿಯಾ ಅಂಡ್​ ಯುರೋಪ್​ ಚೇಂಜಿಂಗ್​ ದ ವರ್ಲ್ಡ್​ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಮಿಸೈಲ್​ ಟೆಕ್ನಿಕಲ್​ ಕಂಟ್ರೋಲ್​ ರಿಜೀಮ್​​ (ಎಂಟಿಸಿಆರ್​) ಕುರಿತು ಉಭಯ ರಾಷ್ಟ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕೋವಿಂದ್ ಭೇಟಿ ಸಂದರ್ಭದಲ್ಲಿ ಮೂರು ಒಪ್ಪಂದಗಳಿಗೆ ಸಹಿ ಮಾಡುವ ಸಾಧ್ಯತೆ ಇದೆ.

ಜೂನ್ 19ರಿಂದ 21ರವರೆಗೆ ಸುರಿನೇಮ್​ಗೆ ಭೇಟಿ ನೀಡಲಿದ್ದಾರೆ. ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುವರು. ಚುನಾವಣೆ, ಆರೋಗ್ಯ, ಔಷಧಿ, ಐಟಿ ಮತ್ತು ದಾಖಲೆಗಳ ಸಂರಕ್ಷಣೆ ಸೇರಿದಂತೆ ಸುಮಾರು ಏಳೆಂಟು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv