25 ಸಾವಿರ ಪೊಲೀಸ್ ಹುದ್ದೆ ಖಾಲಿ ಇದೆ: ಗೃಹ ಸಚಿವ ಪರಮೇಶ್ವರ್‌

ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಗೆ ಒಂದು ಲಕ್ಷ ಆರು ಸಾವಿರ ಸಿಬ್ಬಂದಿ ಬೇಕಿರುವುದು. ಸದ್ಯಕ್ಕೆ ಇಪ್ಪತ್ತೈದು ಸಾವಿರ ಹುದ್ದೆಗಳು ಖಾಲಿ ಇವೆ. ಸತತವಾಗಿ ಪೊಲೀಸ್ ಸಿಬ್ಬಂದಿ ಭರ್ತಿಕಾರ್ಯ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.
ಹುಬ್ಬಳ್ಳಿಯಲ್ಲಿ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು ಕೇವಲ ಶೇಕಡ 40ರಷ್ಟು ಪೊಲೀಸರಿಗೆ ವಸತಿ ಗೃಹಗಳಿವೆ, ಉಳಿದವರಿಗೆ ಕೊಡಲು ನಮ್ಮಲ್ಲಿ ಮನೆಗಳಿಲ್ಲ. ಔರಾದ್ಕರ್ ಸಮಿತಿ ವರದಿ ಜಾರಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಕೊಡುವ ಸಂಬಳ, ಭತ್ಯೆ ಬಗ್ಗೆ ನಮಗೆ ಗೊತ್ತಿರಲಿಲ್ಲ. ಪೊಲೀಸ್ ಸಿಬ್ಬಂದಿಗೆ ಆರನೆಯ ವೇತನ ಆಯೋಗ ಅನ್ವಯ ಮಾಡಲಾಗುವುದು ಎಂದರು. ಪೊಲೀಸರಿಗೆ ರೇಷನ್ ಬದಲು ಹಣ ಕೊಡಲಾಗುತ್ತಿದೆ. ಆರೋಗ್ಯ ಭಾಗ್ಯದ ಜೊತೆಗೆ ಆರೋಗ್ಯ ತಪಾಸಣೆಗೆ ಎಂದು ಪೊಲೀಸರಿಗೆ ಒಂದು ಸಾವಿರ ರೂಪಾಯಿ ಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.

3 ತಿಂಗಳಲ್ಲಿ ಯಾವುದೇ ಮಾದಕ ವಸ್ತು ಸಿಗಬಾರದು:
ಡ್ರಗ್ಸ್ ಮತ್ತು ಗಾಂಜಾ ನಿಯಂತ್ರಣಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಮಾದಕ ವಸ್ತು ಸರಬರಾಜು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ, ಇನ್ನು ಮೂರು ತಿಂಗಳಲ್ಲಿ ಯಾವುದೇ ಮಾದಕ ವಸ್ತು ಸಿಗಬಾರದು. ಡ್ರಗ್ಸ್ ಮತ್ತು ಗಾಂಜಾ ಮಾರಾಟದ ವಿರುದ್ಧ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರತಿ ಕಾಲೇಜುಗಳಿಗೆ ಅಧಿಕಾರಿಗಳು ಹೋಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಅವಳಿ ನಗರದಲ್ಲಿ ಆಟೋಗಳಿಗೆ ಮೀಟರ್ ಯಾಕಿಲ್ಲ? ಎಂದು ಪ್ರಶ್ನಿಸಿದ ಅವರು ಸೂಕ್ತ ಕ್ರಮ ಕೈಗೊಳ್ಳಿ. ಹಾಗೂ ಸಂಚಾರ ನಿಯಮ ಮತ್ತು ವಾಹನ ದಟ್ಟಣೆಯನ್ನ ಸರಿಯಾಗಿ ನಿಯಂತ್ರಿಸಿ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸರಿಗೆ ಸಚಿವ ಪರಮೇಶ್ವರ್‌ ಅವರು ಖಡಕ್ ಆದೇಶ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv