30 ವರ್ಷಗಳ ಬಳಿಕ ಮಕ್ಕಳನ್ನು ಕಣ್ತುಂಬಿಕೊಂಡ ತಾಯಿ.!

ಕೊಡಗು: ಅದು ಬಡ ಕುಟುಂಬ. ಹೊಟ್ಟೆಪಾಡಿಗಾಗಿ ಆ ಕುಟುಂಬದ ಇಬ್ಬರು ಸಹೋದರರು 12ನೇ ವಯಸ್ಸಿನಲ್ಲೇ ಮನೆ ಬಿಟ್ಟು ಕುಟುಂಬಸ್ಥರಿಂದ ದೂರವಾಗಿದ್ದರು. ಆ ಸಹೋದರರ ಹೆತ್ತ ತಾಯಿ ತಮ್ಮ ಮಕ್ಕಳ ಬರುವಿಕೆಗಾಗಿ ಸುಮಾರು 30 ವರ್ಷದಿಂದ ಕಾಯುತ್ತಿದ್ದಳು. ಆದರೆ ಮಕ್ಕಳು ಬರುವುದಿರಲಿ, ಸಂಪರ್ಕಕ್ಕೆ ಕೂಡ ಸಿಗುತ್ತಿರಲಿಲ್ಲ. ಮಕ್ಕಳನ್ನ ನೋಡುವ ಭಾಗ್ಯ ನನಗಿಲ್ಲ ಅಂತ ಅಂದ್ಕೊಳ್ತಿರುವಾಗಲೆ ಮಕ್ಕಳು ಪ್ರತ್ಯಕ್ಷರಾಗಿದ್ರು… ಅವರ್ಯಾರು, ಲೈಫಲ್ಲಿ ನಡೆದದ್ದೇನು ಇಲ್ಲಿದೆ ಉತ್ತರ.
ಇಳಿ ವಯಸ್ಸಿನ ಈ ತಾಯಿ ಮುಖದಲ್ಲಿ ಅದೇನೋ ಅಮೂಲ್ಯ ವಸ್ತು ಸಿಕ್ಕಂಥ ಸಂತಸ. ತಾಯಿಯೊಂದಿಗೆ ಪ್ರೀತಿಯಿಂದ ಮಾತನಾಡ್ತಿರುವ ಮಕ್ಕಳ ಮನದಲ್ಲಿ ಕಳೆದು ಹೋಗಿದ್ದ ಮಮತೆ, ವಾತ್ಸಲ್ಯವನ್ನು ಮರಳಿ ಪಡೆದ ಧನ್ಯತಾಭಾವ. ಎಲ್ಲರಲ್ಲೂ ಸಂಭ್ರಮದ ವಾತಾವರಣ. ಇದು 30 ವರ್ಷಗಳ ನಂತರ ತಾಯಿ ಮಕ್ಕಳನ್ನು ಒಂದುಗೂಡಿಸಿರುವ ಮನಮಿಡಿಯುವ ಸ್ಟೋರಿ. ಶೇಖರ್ ನಾಯರ್(53) ಮತ್ತು ಆನಂದ್ ನಾಯರ್(50) ಇಬ್ರು ಸಹೋದರರು. ಮಕ್ಕಳ ಬರುವಿಕೆಗೆ ಶಬರಿಯಂತೆ ಕಾದು ಈಗ ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ತಾಯಿಯ ಹೆಸರು ತಂಗಮ್ಮ. ಮೂಲತಃ ಕೇರಳದವರು 50 ವರ್ಷಗಳ ಹಿಂದೆ ಕೇರಳದಿಂದ ಕುಮಾರ್ ಹಾಗೂ ತಂಗಮ್ಮ ದಂಪತಿ ಮಡಿಕೇರಿ ಹೊರವಲಯದ ತೋಟವೊಂದರಲ್ಲಿ ಬಂದು ನೆಲೆಸಿದ್ರು. ಕಡು ಬಡತನ ಇದ್ದಿದ್ರಿಂದ 12ನೇ ವಯಸ್ಸಿನಲ್ಲೇ ಹಿರಿಯ ಪುತ್ರ ಶೇಖರ್ ನಾಯರ್ ಕೆಲಸ ಹುಡುಕಿ ಮುಂಬಯಿಗೆ ಹೋದ್ರು. ಕೆಲ ದಿನಗಳ ಬಳಿಕ ಆನಂದ್ ನಾಯರ್ ಕೂಡ ಅಣ್ಣನ ಹಾದಿ ಹಿಡಿದು ತೆರಳಿದ್ರು. ಮುಂಬೈಗೆ ಹೋದ ಇಬ್ಬರು ಸಹೋದರರು ಮತ್ತೆ ಬರಲೇ ಇಲ್ಲ. ಪೋಷಕರಿಗೆ ಮಕ್ಕಳ ಸಂಪರ್ಕವೇ ಇಲ್ಲದಾಯಿತು. ಅಲ್ಲಿ ಆಟೋ ಚಾಲನೆ, ಹೋಟೆಲ್ ಕೆಲಸ ಮಾಡಿಕೊಂಡಿದ್ದ ಇಬ್ಬರು ಸಹೋದರರು ಸಾಕಷ್ಟು ಬಾರಿ ಕುಟುಂಬವನ್ನು ಸೇರಲು ಪ್ರಯತ್ನಿಸಿದ್ರಾದ್ರು, ಪ್ರಯೋಜನವಾಗಲಿಲ್ಲ. ಈ ನಡುವೆ ಪತಿಯನ್ನು ಕಳೆದುಕೊಂಡಿದ್ದ ತಂಗಮ್ಮ ತೀರಾ ಕುಗ್ಗಿ ಹೋಗಿದ್ರು.
ಇತ್ತ ಮುಂಬೈನಲ್ಲಿ ಹೇಗಾದರೂ ಮಾಡಿ ಕುಟುಂಬವನ್ನು ಸೇರಬೇಕೆಂದು ಹಂಬಲಿಸುತ್ತಿದ್ದ ಈ ಸಹೋದರರು ಸಾಕಷ್ಟು ಬಾರಿ ಮಡಿಕೇರಿಗೆ ಭೇಟಿ ನೀಡಿ ಹುಡುಕಾಡಿದ್ರು. 30 ವರ್ಷಗಳ ಹಿಂದಿನ ಮಡಿಕೇರಿಗೂ ಈಗಿನ ಮಡಿಕೇರಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಕಂಡು ಕುಟುಂಬಸ್ಥರನ್ನು ಹುಡುಕಲಾರದೆ ಹಿಂತೆರಳಿದ್ದರು. ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಮತ್ತೆ ಮಡಿಕೇರಿಗೆ ಬಂದಿದ್ದ ಸಹೋದರರು, ಹೇಗಾದರೂ ಮಾಡಿ ಕುಟುಂಬದವರನ್ನು ಪತ್ತೆಮಾಡಬೇಕೆಂದು ಹಂಬಲಿಸುತ್ತಿದ್ದರು. ಈ ಸಂದರ್ಭ ಸಹೋದರರಿಗೆ ನೆರವಾಗಿದ್ದು ಕೊಡಗಿನ ಇಂದು ದಿನ ಪತ್ರಿಕೆ.ಮಡಿಕೇರಿಗೆ ಬಂದು ಬಾಡಿಗೆ ರೂಂ ಪಡೆದು ಮೂರು ದಿನ ತಂಗಿದ್ದ ಸಹೋದರರು ಪತ್ರಿಕೆಯಲ್ಲಿ ಕುಟುಂಬದ ಹಿನ್ನೆಲೆ ತಂದೆ-ತಾಯಿ ಹೆಸರನ್ನು ಹಾಕಿ ಕುಟುಂಬವನ್ನು ಹುಡುಕಿಕೊಡುವಂತೆ ಜಾಹಿರಾತು ಹಾಕಿದ್ದರು. ವಿಶೇಷ ಅಚ್ಚರಿ ಎಂದರೆ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾದ ದಿನವೇ ಫಲ ಸಿಕ್ಕಿದೆ. ಪೇಪರ್ ಓದಿದ ನೆರೆಮನೆಯವರು ತಾಯಿ ಮಕ್ಕಳನ್ನು ಒಂದುಗೂಡಿಸಲು ನೆರವಾಗಿದ್ದಾರೆ. ಇದೀಗ ತಾಯಿ, ಸಹೋದರರು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಆನಂದದ ಆಲೆಯಲ್ಲಿ ತೇಲುತ್ತಿದ್ದಾರೆ.
ನಾವು ಈ ರೀತಿಯ ಸನ್ನಿವೇಶವನ್ನು ಸಿನೆಮಾಗಳಲ್ಲಿ ನೋಡ್ತಿರ್ತೇವೆ. ಆದ್ರೆ ಮಡಿಕೇರಿಯ ಈ ಕುಟುಂಬದ ಸ್ಟೋರಿ ಕೂಡಾ ಯಾವ ಸಿನೆಮಾಗೂ ಕಡಿಮೆಯಿಲ್ಲ ಅನ್ನೋ ಹಾಗಿದೆ. ಇನ್ಮುಂದೆ ಈ ಸಂಸಾರ ಆನಂದ ಸಾಗರದಂತಿರಲಿ… ಇಳಿ ವಯಸ್ಸಿನ ತಾಯಿಯನ್ನು ಮಕ್ಕಳು ಅಕ್ಕರೆಯಿಂದ ನೋಡಿಕೊಳ್ಳಲಿ ಅನ್ನೋದು ನಮ್ಮ ಆಶಯ..

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv