ಸುರಿಯೋ ಮಳೆಯಲ್ಲೂ ಕಾಫಿನಾಡಲ್ಲಿ ಅಡ್ಡಾಡುತ್ತಿರುವ ಪ್ರವಾಸಿಗರು..!

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆಯ ನಡುವೆಯೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗ್ತಿದೆ..! ಮುಳ್ಳಯ್ಯನಗಿರಿಯಲ್ಲಿ ಆವರಿಸಿಕೊಂಡಿರೋ‌ ಮಂಜಿನ ರಾಶಿಯ ಸೊಬಗು ಆಸ್ವಾದಿಸಲು ಚಾರಣಿಗರ ಜನಜಾತ್ರೆ ಸೇರಿದೆ. ಕಾಫಿನಾಡಿನ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಮಳೆಯಲ್ಲಿ ನೆನೆಯುತ್ತಲೇ ಪ್ರವಾಸಿಗರು ಬೆಟ್ಟ ಹತ್ತುತ್ತಿದ್ದಾರೆ. ಗಿರಿಯ ಸೌಂದರ್ಯವನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಇನ್ನೂ ಕೆಲವರು ಗಿರಿಯಲ್ಲಿ ಕುಣಿದು ಕುಪ್ಪಳಿಸ್ತಿದ್ದಾರೆ. ಬೈಕ್ ಗಳಲ್ಲಿ ನೆನೆಯುತ್ತಲೇ ಯುವಕರು ಮೋಜಿನ ಸವಾರಿ ನಡೆಸುತ್ತಿದ್ದಾರೆ.

ಮೈದುಂಬಿ ಹರಿಯುತ್ತಿದೆ ಹೊನ್ನಮ್ಮ ಫಾಲ್ಸ್

ಬಾಬಾಬುಡನನ್ ಗಿರಿಗೆ ಹೋಗುವ ರಸ್ತೆಯ ಮಧ್ಯೆ ಸಿಗುವ ಹೊನ್ನಮ್ಮ  ಜಲಪಾತ ತುಂಬಿ ಹರಿಯುತ್ತಿದೆ. ಜಪಾತದಲ್ಲಿ ಪ್ರವಾಸಿಗ ಮೋಜು ಮಸ್ತಿ ಮಾಡುತ್ತಿದ್ದು ಸುತ್ತಮುತ್ತಲಿ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ನಿನ್ನೆ ಸಂಜೆಯಿಂದ ಮಧ್ಯ ರಾತ್ರಿವರೆಗೂ ವರುಣ ಬಿಡುವು ನೀಡಿದ್ದ. ಇಂದು ಬೆಳಗಿನ ಜಾವದಿಂದ ಮತ್ತೆ ಧಾರಾಕಾರವಾಗಿ ಮಳೆ ಸುರಿಯುತ್ತಿರೋದು ಮಲೆನಾಡಿಗರನ್ನ ಚಿಂತೆಗೀಡು ಮಾಡಿದ್ದರೆ ಪ್ರವಾಸಿಗರಿಗೆ ಮೋಜಿನದ್ದಾಗಿದೆ.
ಕಳಸ, ಬಾಳೆಹೊನ್ನೂರು, ಶೃಂಗೇರಿ ಸುತ್ತಮುತ್ತ ಸುರಿಯುತ್ತಿರೋ ಮಳೆಯಿಂದ ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬಾಳೆಹೊನ್ನೂರು-ಕಳಸ ಭಾಗದಲ್ಲಿ ಮಳೆ ಹೀಗೆ ಮುಂದುವರೆದ್ರೆ ಭದ್ರಾ ನದಿ ನೀರಿನಿಂದ ಸೃಷ್ಟಿಯಾಗೋ ಅವಾಂತರಗಳನ್ನ ಈಗಲೇ ನೆನೆದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶೃಂಗೇರಿಯ ಸುತ್ತಮುತ್ತ ಸುರಿಯುತ್ತಿರೋ ಮಳೆಯಿಂದ ತುಂಗಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶೃಂಗೇರಿಯ ಸ್ಥಳಿಯರು ಹಾಗೂ ಪ್ರವಾಸಿಗರು ಆತಂಕದಲ್ಲಿದ್ದಾರೆ. ಜೂನ್ ವೇಳೆಗೆ ಸರಾಸರಿ ಮಳೆಗಿಂತ ಶೇ. 82 ರಷ್ಟು ಹೆಚ್ಚಿನ ಮಳೆಯಿಂದ ಜನ ಕಂಗಾಲಾಗಿದ್ರು. ಇದೀಗ ಮತ್ತೆ ಬಿಟ್ಟು-ಬಿಟ್ಟು ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಆದ್ರೂ ಸದ್ಯ ಮಳೆ ನಿಲ್ಲುವ ಮೂನ್ಸೂಚನೆ ಇಲ್ಲದಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv