ನಾಳೆಯಿಂದ ವಿಮಾನ ಹಾರಾಟ ನಡೆಸದಿರಲು 1,100 ಜೆಟ್​​ ಏರ್​ವೇಸ್​ ಪೈಲೆಟ್​​ಗಳ ನಿರ್ಧಾರ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಜಟ್​​ ಏರ್​​ವೇಸ್​​ನ ಸುಮಾರು 1100 ಪೈಲೆಟ್​​ಗಳು ಸಂಬಳ ಸಿಗದ ಕಾರಣ, ನಾಳೆಯಿಂದ ವಿಮಾನ ಹಾರಾಟ ನಡೆಸದಿರಲು ನಿರ್ಧರಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರೋ ಜೆಟ್​​ ಏರ್​​ವೇಸ್​​​ ಕಳೆದ ಜನವರಿಯಿಂದ ಪೈಲೆಟ್​​ಗಳಿಗೆ, ಎಂಜಿನಿಯರ್​​ಗಳಿಗೆ ಹಾಗೂ ಕೆಲವು ಹಿರಿಯ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಅಲ್ಲದೆ ಕಳೆದ ಮಾರ್ಚ್​​ನಿಂದ ಇತರೆ ವಿಭಾಗದ ಸಿಬ್ಬಂದಿಗೂ ಸಂಬಳ ಕೊಟ್ಟಿಲ್ಲ.

ಇಂದಿಗೆ ನಮ್ಮ ಮೂರುವರೆ ತಿಂಗಳ ಸಂಬಳ ನೀಡಿಲ್ಲ. ಯಾವಾಗ ಸಂಬಳ ಕೊಡ್ತಾರೆ ಅನ್ನೋದು ಕೂಡ ಗೊತ್ತಿಲ್ಲ. ಹೀಗಾಗಿ ನಾವು ಏಪ್ರಿಲ್ 15ರಿಂದ ವಿಮಾನ ಹಾರಾಟ ನಡೆಸದಿರಲು ನಿರ್ಧರಿಸಿದ್ದೇವೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಜೆಟ್​ ಏರ್​ವೇಸ್​​ನ ಪೈಲಟ್​ ಬಾಡಿ ನ್ಯಾಷನಲ್​ ಏವಿಯೇಟರ್ಸ್​​ ಗಿಲ್ಡ್​ನ ಎಲ್ಲಾ 1100 ಸಿಬ್ಬಂದಿ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಪೈಲೆಟ್​​ಗಳು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಜೆಟ್​​ ಏರ್​ವೇಸ್​ ಸದ್ಯ ಎಸ್​​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟದ ನಿಯಂತ್ರಣದಲ್ಲಿದೆ. ಜೆಟ್​​ ಏರ್​ವೇಸ್​​ಗೆ ಸಾಲ ನೀಡಲು ಬ್ಯಾಂಕ್​ಗಳು ಮುಂದೆ ಬಂದ ಹಿನ್ನೆಲೆ ಕಳೆದ ತಿಂಗಳಷ್ಟೇ ಅಧ್ಯಕ್ಷ ನರೇಶ್​ ಗೋಯಲ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv