10ನೇ ತರಗತಿಯ ವಿದ್ಯಾರ್ಥಿಗಳನ್ನು ಮತ್ತೆ 9ನೇ ಕ್ಲಾಸ್‌ಗೆ ಕಳುಹಿಸಿದ ಶಾಲೆ..!

ಬೆಂಗಳೂರು: 10ನೇ ತರಗತಿಯಲ್ಲಿ ಓದುತ್ತಿದ್ದ 15 ವಿದ್ಯಾರ್ಥಿಗಳನ್ನು ಏಕಾಏಕಿ 9ನೇ ತರಗತಿಗೆ ಕಳುಹಿಸಿ ಶಾಲೆಯೊಂದು ಯಡವಟ್ಟು ಮಾಡಿದೆ. ಆನೇಕಲ್‌ ತಾಲೂಕಿನ ಗುಟ್ಟಹಳ್ಳಿಯ ನಿರ್ಮಲ ವಿದ್ಯಾಲಯದ ಆಡಳಿತ ಮಂಡಳಿ ಇಂತಹದೊಂದು ವಿಚಿತ್ರ ನಿರ್ಧಾರ ತೆಗೆದುಕೊಂಡು ಪೋಷಕರ ಆಕ್ರೋಶಕ್ಕೆ ತುತ್ತಾಗಿದೆ.

10ನೇ ‌ತರಗತಿಗೆ ಪ್ರಮೋಟ್ ಮಾಡಿದ್ದ 15 ಮಕ್ಕಳನ್ನು 9ನೇ ತರಗತಿಗೆ ದಿಢೀರನೇ ಡಿಮೋಟ್‌ ಮಾಡಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಕೂಡಲೇ ಮತ್ತೆ 9 ನೇ ತರಗತಿಗೆ ಹೋಗಿ ಎಂದು ಪತ್ರ ಕೊಟ್ಟ ಶಿಕ್ಷಕರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಪತ್ರ ನೋಡಿದ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.

ಇತ್ತ ಪಾಸ್ ಆದ್ರೂ ಮತ್ತೆ ಯಾಕೆ 9ನೇ ತರಗತಿಗೆ ಹೋಗಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನಿಸುತ್ತಿದ್ದಾರೆ. ನಮಗೆ ಶಾಲೆಯೂ ಬೇಡ, ಏನೂ ಬೇಡ ನಾವು ಸಾಯುತ್ತೇವೆ ನಮ್ಮ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರುವ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶಗೊಂಡಿದ್ದಾರೆ.

ಇನ್ನು ಮಾಧ್ಯಮ ವರದಿಯಿಂದ ಎಚ್ಚೆತ್ತ ಸ್ಕೂಲಿನ ಪ್ರಾಂಶುಪಾಲರಾದ ಜಯ ಪ್ರಕಾಶ್, ನಮ್ಮಿಂದ ತಪ್ಪಾಗಿದೆ, ನಾವು ಪೋಷಕರ ಮಾತನ್ನು ಒಮ್ಮೆ ಕೇಳಬೇಕಿತ್ತು. ನಾವು ಪೋಷಕರಿಗೆ ಅರ್ಥ ಮಾಡಿಸುವ ಸಲುವಾಗಿ ಈ ರೀತಿ ಮಾಡಿದೆವು ಎಂದು ಹೇಳಿದರು.

ನಮ್ಮ ಉದ್ದೇಶ ಒಳ್ಳೆಯದ್ದೇ ಆಗಿತ್ತು. ಹತ್ತನೇ ತರಗತಿಯಲ್ಲಿ ಫೇಲ್ ಆಗೋದಕ್ಕಿಂತ 9ನೇ ‌ತರಗತಿಯಲ್ಲೇ ಉಳಿಸಿದರೆ ಲೇಸು ಎನಿಸಿತು. ಈ ಉದ್ದೇಶದಿಂದ ಈ ರೀತಿ ಮಾಡಿದೆವು ಎಂದರು. ಇದು ಪೋಷಕರಿಗೆ ಸರಿ ಬರಲಿಲ್ಲ ಅಂದರೆ ಕ್ಷಮಿಸಿ, ಈ ಕೂಡಲೇ ಕಳಿಸಿದ ಪತ್ರವನ್ನು ಹಿಂಪಡೆಯುತ್ತೇವೆ. ಇನ್ನೆಂದೂ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಈ ಕೂಡಲೇ 15 ವಿದ್ಯಾರ್ಥಿಗಳನ್ನು ಹತ್ತನೇ ತರಗತಿಗೆ ಕಳಿಸುತ್ತೇವೆ ಎಂದು ಸ್ಕೂಲಿನ‌ ಪ್ರಾಂಶುಪಾಲ ಜಯ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv