ಶೇ.100ರಷ್ಟು ಶೇರುಗಳನ್ನೂ ಮಾರುತ್ತಾ ಏರ್ ಇಂಡಿಯಾ..?

ನವದೆಹಲಿ: ಏರ್ ಇಂಡಿಯಾದ ಶೇರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ಹೊಸ ನಿಯಮಾವಳಿಗಳ ಜೊತೆ ಪರಿಶೀಲನೆ ನಡೆಸಲಿದೆ ಅಂತ ಮಾಹಿತಿ ಲಭ್ಯವಾಗಿದೆ. ಇತ್ತೀಚಿಗಷ್ಟೇ ಸರ್ಕಾರ ಏರ್ ಇಂಡಿಯಾ ಶೇರುಗಳನ್ನ ಮಾರಾಟ ಮಾಡಲು ಮುಂದಾಗಿತ್ತು. ಆದ್ರೆ, ಅವಧಿ ವಿಸ್ತರಿಸಿದ್ರೂ ಒಂದೇ ಒಂದು ಬಿಡ್ಡಿಂಗ್ ಬಂದಿರಲಿಲ್ಲ.
ಹೀಗಾಗಿ ಸರ್ಕಾರ ಶೇರು ಮಾರಾಟಕ್ಕೆ ತನ್ನ ನಿಯಮಾವಳಿಗಳನ್ನೇ ಬದಲಿಸುವ ಕುರಿತು ಚಿಂತನೆ ನಡೆಸಿದ್ದು, ಹೊಸ ನಿಯಮಾವಳಿಗಳನ್ನ ತಯಾರಿಸಲಿದೆ. ಇದರಲ್ಲಿ ಏರ್ ಇಂಡಿಯಾದ ಸಂಪೂರ್ಣ ಶೇಕಡ 100ರಷ್ಟು ಶೇರುಗಳನ್ನೂ ಮಾರಾಟ ಮಾಡುವ ಕುರಿತು ಆಲೋಚಿಸುವ ಸಾಧ್ಯತೆ ಹೆಚ್ಚಿದೆ ಅಂತ ಹೇಳಲಾಗ್ತಿದೆ. ಈ ಹಿಂದೆ ಶೇಕಡ 24ರಷ್ಟು ಶೇರುಗಳನ್ನ ತನ್ನ ಬಳಿ ಉಳಿಸಿಕೊಂಡು, ಮಿಕ್ಕ ಶೇರುಗಳನ್ನ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದ್ರೆ, ಇದು ಇತರೆ ಹೂಡಿಕೆದಾರರನ್ನ ಆಕರ್ಷಿಸಿರಲಿಲ್ಲ. ಹೀಗಾಗಿ ಕೇಂದ್ರ ತನ್ನ ನಿರ್ಧಾರವನ್ನ ಬದಲಿಸುವ ಸಾಧ್ಯತೆ ಇದೆ.

ಏರ್ ಇಂಡಿಯಾ ಸುಮಾರು 50 ಸಾವಿರ ಕೋಟಿಗೂ ಹೆಚ್ಚು ಸಾಲವನ್ನ ಹೊಂದಿರುವ ಕಾರಣಕ್ಕೇ ಖರೀದಿದಾರರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗ್ತಿದೆ. ಹೀಗಾಗಿ ಈಗ ಶೇಕಡ 100ರಷ್ಟು ಶೇರುಗಳನ್ನೂ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಬಹುದು ಅಂತ ಆರ್ಥಿಕ ಇಲಾಖೆಯ ನಿರ್ದೇಶಕ ಸುಭಾಶ್​ ಚಂದ್ರ ಗಾರ್ಗ್​ ಮಾಹಿತಿ ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv