ರೈತರ ಹಿತಕಾಯಲು ಜಲಾಶಯಗಳಿಂದ 100 ದಿನ ಹೊರಹರಿವು: ಡಿಕೆ ಶಿವಕುಮಾರ್

ಬೆಂಗಳೂರು: ಈಗಷ್ಟೇ ಭದ್ರಾ ಜಲಾಶಯದ ನೀರು ಹರಿಸುವ ಸಂಬಂಧ ಶಾಸಕರ ಜೊತೆ ಚರ್ಚೆ ನಡೆಸಿದ್ದೇನೆ. ಜಲಾಶಯದಿಂದ ನೂರು ದಿನ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ತುಂಬಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಿದೆ ಎಂದಿದ್ದಾರೆ.

ಇನ್ನು ರೈತರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ನೀರಾವರಿ ಸಲಹಾ ಸಮಿತಿಗೆ ಕೆಲವು ಮಂತ್ರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಕೆಆರ್​ಎಸ್ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಸಚಿವ ಸಿ.ಎಸ್ ಪುಟ್ಟರಾಜು, ಕಬಿನಿಗೆ ಪುಟ್ಟರಂಗಶೆಟ್ಟಿ, ಘಟಪ್ರಭಾ-ಮಲಪ್ರಭಾಕ್ಕೆ ರಮೇಶ್ ಜಾರಕಿಹೊಳಿ, ಹಾರಂಗಿಗೆ ಸಾರಾ ಮಹೇಶ್, ಹೇಮಾವತಿ ಜಲಾಶಯಕ್ಕೆ ಹೆಚ್​ಡಿ ರೇವಣ್ಣ ಹಾಗೂ ತುಂಗಭದ್ರಾ ಜಲಾಶಯಕ್ಕೆ ನಾಡಗೌಡರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದರು.

ಅಲ್ಲದೇ ಈ ನಿಯೋಜನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಾನು ಇಬ್ಬರೂ ಚರ್ಚಿಸಿಯೇ ಮಾಡಿದ್ದೇವೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv