ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಟಿಪ್ಪರ್​: ಮಹಿಳೆ ಸಾವು, ಐವರಿಗೆ ಗಾಯ

ಧಾರವಾಡ: ರಸ್ತೆ ಪಕ್ಕದಲ್ಲಿ ನಿಂತಿದ್ದ 6 ಜನರ ಮೇಲೆ ಟಿಪ್ಪರ್​ ಲಾರಿ ಹಾರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಬಸವ್ವ ತಳವಾರ(50) ಸಾವಿಗೀಡಾದ ಮಹಿಳೆ. ರೇಣುಕಾ ಹೊಂಬಳ(35), ಜಾಕೀರ್ ಹುಸ್ಸೇನ್ ಮುಲ್ಲಾ(35), ಮಲ್ಲಿಕಾರ್ಜುನ ಹನುಮಂತಪ್ಪ ನವಲೂರು(40) ಮತ್ತು ರಿಯಾಜ್ ಖಾನ್(40) ಗಾಯಗೊಂಡವರು.ಕೆಎ25- D6449 ನಂಬರಿನ ಟಿಪ್ಪರ್​ವೊಂದು ಧಾರವಾಡದಿಂದ ಸವದತ್ತಿ ಕಡೆಗೆ ಹೊರಟಿದ್ದ ವೇಳೆ ಚಾಲಕನ ನಿರ್ಲಕ್ಷ್ಯದಿಂದಾಗಿ ಅಮ್ಮಿನಭಾವಿ ಬಳಿ ರಸ್ತೆ ಬದಿ ನಿಂತಿದ್ದ 6 ಜನರ ಮೇಲೆ​ ಹರಿದಿದೆ. ಟಿಪ್ಪರ್​ ಗುದ್ದಿದ ರಭಸಕ್ಕೆ ಓರ್ವ ಮಹಿಳೆ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನುಳಿದ ಐವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು, 108 ಅಂಬ್ಯುಲೆನ್ಸ್​ಗೆ ಕರೆ ಮಾಡಿ ಗಾಯಾಳುಗಳನ್ನು  ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಸದ್ಯ ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿಯೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv